ಹೆಣ್ಣು ಭ್ರೂಣ ಹತ್ಯೆ ಕಾನೂನು ಬಾಹಿರ ಕೃತ್ಯ:ಉಷಾರಾಣಿ
ಸೊರಬ,ಜು.28: ಹೆಣ್ಣು ಭ್ರೂಣ ಹತ್ಯೆ ಕಾನೂನು ಬಾಹಿರ ಕೃತ್ಯವಾಗಿದ್ದು, ಪ್ರಸ್ತುತ ಸುಶಿಕ್ಷಿತರೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸಮಿತಿಯ ಅಧ್ಯಕ್ಷರಾದ ಆರ್. ಉಷಾರಾಣಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸವ ಪೂರ್ವ ಹೆಣ್ಣು ಭ್ರೂಣ ಪತ್ತೆಯ ತಾಂತ್ರಿಕತೆ ದುರ್ಬಳಕೆ ನಿಷೇಧ ಕಾಯ್ದೆ 1994ರ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಪ್ರಜ್ಞಾವಂತ ನಾಗರಿಕರಲ್ಲೆ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ದೇಶದಲ್ಲಿ ಸರಾಸರಿ ಪುರುಷರಿಗೆ ಹೋಲಿಸಿದರೆ ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿದೆ, ಇದಕ್ಕೆ ಕಾರಣ ಗಂಡು ಮಕ್ಕಳ ಮೇಲಿನ ಅತೀಯಾದ ಆಸೆಯಿಂದಾಗಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ನಡೆಯುತ್ತಿದೆ.
ಕಾಯ್ದೆಯ ಪ್ರಕಾರ ಭ್ರೂಣಾವಸ್ಥೆಯಲ್ಲಿ ಮಗು ಸರಿಯಾಗಿ ಬೆಳವಣಿಗೆ ಆಗದಿದ್ದಲ್ಲಿ ಹಾಗೂ ತಾಯಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಂದಭರ್ ಕಂಡುಬಂದಲ್ಲಿ ಮಾತ್ರ ಭ್ರೂಣ ಹತ್ಯೆಗೆ ಅವಕಾಶ ಇದೆ ಎಂದ ಅವರು, ಗಭರ್ ಪಾತಕ್ಕೆ ಮುಂದಾಗುವವರು ಹಾಗೂ ಗಭರ್ಪಾತಕ್ಕೆ ಪ್ರೇರಣೆ ನೀಡುವವರು, ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಕಾಯ್ದೆಯ ಪ್ರಕಾರ ಹೆಣ್ಣು ಭ್ರೂಣ ಹತ್ಯೆ ಮಾಡಿಸಿಕೊಂಡರೆ ಅಂಥವರಿಗೆ 3 ವರ್ಷದಿಂದ 5 ವರ್ಷ ಜೈಲು ಹಾಗೂ 10,000 ದಿಂದ 50,000 ರೂ. ವರೆಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು. ಸೊರಬ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲೋಕೆಶ್ ಮಾತನಾಡಿದರು.ಕಿರಿಯ ವಿಭಾಗದ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದರು.







