ಸಲ್ಮಾನ್ ಖುಲಾಸೆಯ ಮೇಲ್ಮನವಿ: ರಾಥೋರ್
ಕೃಷ್ಣಮೃಗ ಕಳ್ಳಬೇಟೆ ಪ್ರಕರಣ
ಜೈಪುರ, ಜು.28: ಕೃಷ್ಣಮೃಗ ಕಳ್ಳಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್‌ರನ್ನು ಖುಲಾಸೆಗೊಳಿಸಿರುವ ರಾಜಸ್ಥಾನ ಹೈಕೋರ್ಟ್‌ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜಸ್ಥಾನ ಸರಕಾರ ನಿರ್ಧರಿಸಿದೆ.
1998ರಲ್ಲಿ ಸಲ್ಮಾನ್ ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿರುವುದು ಹೌದು. ಆದರೆ, ತನಗೆ ಬೆದರಿಕೆಯೊಡ್ಡಿದ್ದ ಕಾರಣ ನ್ಯಾಯಾಲಯದಲ್ಲಿ ಹೇಳಿಕೆ ನೀಡಲು ಸಾಧ್ಯವಾಗಲಿಲ್ಲವೆಂದು ಪ್ರಮುಖ ಸಾಕ್ಷಿಯೊಬ್ಬ ನಿನ್ನೆ ಎನ್‌ಡಿಟಿವಿಗೆ ತಿಳಿಸಿದ ಬಳಿಕ, ಆತನಿಗೆ ರಕ್ಷಣೆಯ ಭರವಸೆ ನೀಡಿ ಈ ನಿರ್ಧಾರ ಕೈಗೊಂಡಿದೆ.
ಕಳ್ಳಬೇಟೆಯ ವೇಳೆ ಸಲ್ಮಾನ್ ಉಪಯೋಗಿಸಿದ್ದ ಜಿಪ್ಸಿ ವಾಹನದ ಚಾಲಕ ಹರೀಶ್ ದುಲಾನಿ ಎಂಬಾತ ಈ 18 ವರ್ಷ ಹಳೆಯ ಪ್ರಕರಣದಲ್ಲಿ ಕಾಣೆಯಾಗಿದ್ದಾನೆನ್ನಲಾಗಿತ್ತು. ಸಾಕ್ಷದ ಕೊರತೆಯಿಂದ ಸಲ್ಮಾನ್ ಖುಲಾಸೆ ಪಡೆದ 2 ದಿನಗಳ ಬಳಿಕ ಪ್ರತ್ಯಕ್ಷನಾಗಿರುವ ದುಲಾನಿ, ತಾನು 18 ವರ್ಷಗಳ ಹಿಂದೆ ಮ್ಯಾಜಿಸ್ಟ್ರೇಟ್ ಒಬ್ಬರ ಮುಂದೆ ನೀಡಿದ್ದ ಹೇಳಿಕೆಗೆ ಬದ್ಧನಾಗಿದ್ದೇನೆ. ತಾನು ತಲೆಮರೆಸಿಕೊಂಡಿರಲಿಲ್ಲ. ತನ್ನ ತಂದೆಗೆ ಬೆದರಿಕೆಯ ಕರೆ ಬಂದಿತು. ಅದರಿಂದ ಅಂಜಿ ತಾನು ಮನೆ ಬಿಟ್ಟಿದ್ದೆ. ತನಗೆ ಪೊಲೀಸ್ ರಕ್ಷಣೆ ನೀಡುತ್ತಿದ್ದರೆ, ತಾನು ಹೇಳಿಕೆ ನೀಡಲು ಸಾಧ್ಯವಾಗಬಹುದಿತ್ತೆಂದು ಹೇಳಿದ್ದನು. ಆತನ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಸ್ಥಾನದ ಗೃಹ ಸಚಿವ ಗುಲಾಬ್‌ಚಂದ್ ಕಟಾರಿಯ, ರಕ್ಷಣೆಗಾಗಿ ದುಲಾನಿ ಎಂದೂ ತಮ್ಮ ಬಳಿ ಬಂದಿರಲಿಲ್ಲ. ಆದರೆ, ಆತ ಲಿಖಿತ ಮನವಿ ಸಲ್ಲಿಸಿದರೆ ಭದ್ರತೆ ಒದಗಿಸಲಾಗುವುದು ಎಂದಿದ್ದಾರೆ







