ಪ್ರವಾಹ ಮುನ್ಸೂಚನೆಗೆ ಪ್ರಾಣಿ ನಡವಳಿಕೆಗಳೇ ಇವರಿಗೆ ಆಧಾರ!

ಪ್ರವಾಹದ ಬಗ್ಗೆ ಮುಂಜಾಗ್ರತೆ ನೀಡುವ ಯಾವ ಮುನ್ನೆಚ್ಚರಿಕೆ ವ್ಯವಸ್ಥೆಯೂ ಇಲ್ಲದಿದ್ದರೂ, ಅಸ್ಸಾಂ ಗ್ರಾಮಸ್ಥರು ಮಾತ್ರ, ಪ್ರಾಣಿಗಳ ವಿಚಿತ್ರ ನಡವಳಿಕೆಯ ಆಧಾರದಲ್ಲಿ ಪ್ರವಾಹವನ್ನು ಅಂದಾಜಿಸುತ್ತಾರೆ ಮತ್ತು ಹಲವು ಸಂದರ್ಭಗಳಲ್ಲಿ ಸಂಭಾವ್ಯ ಮುಳುಗಡೆಯಿಂದ ಪಾರಾಗಿದ್ದಾರೆ ಎಂಬ ವಿಚಿತ್ರವಾದರೂ ಸತ್ಯ ಅಂಶವನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಮಿಡತೆ, ಚಿಟ್ಟೆಯಂಥ ಕೀಟಗಳು ತಮ್ಮ ಅಡಗುದಾಣಗಳಿಂದ ಹೊರಬಂದು ಗೊತ್ತುಗುರಿಯಿಲ್ಲದೆ ಹಾರಾಡಿಕೊಂಡು ಮನೆಗಳ ಒಳಗೆ ಬರುತ್ತವೆ. ಇದು ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗುವುದರ ಸಂಕೇತ. ಬಹುತೇಕ ಸಂದರ್ಭದಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಮುನ್ಸೂಚನೆ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಂತೆಯೇ ಇರುವೆಗಳು ತಮ್ಮ ವಾಸತಾಣವನ್ನು ಮೊಟ್ಟೆ, ಆಹಾರ ಪದಾರ್ಥಗಳು ಮತ್ತಿತರ ವಸ್ತುಗಳೊಂದಿಗೆ ಬದಲಾಯಿಸಲು ಹೊರಟರೆ ಅದು ಖಂಡಿತವಾಗಿಯೂ ಸಂಭಾವ್ಯ ಪ್ರವಾಹದ ಮನ್ಸೂಚನೆ ಎಂದು ಸ್ಪಷ್ಟಪಡಿಸುತ್ತಾರೆ. ನರಿ ಎತ್ತರದ ಪ್ರದೇಶದಲ್ಲಿ ಹೋಗಿ ಕೂಗಿಕೊಂಡದರೆ ಅದು ಶುಷ್ಕ ವಾತಾವರಣ ಸುದೀರ್ಘ ಅವಧಿಗೆ ಮುಂದುವರಿಯುವ ಮುನ್ಸೂಚನೆ. ಆದರೆ ಅದು ಕೆಳಮಟ್ಟದ ಪ್ರದೇಶಗಳಲ್ಲಿ ನಿಂತು ಊಳಿಟ್ಟರೆ, ಅದು ಬಹುಶಃ ಭಾರಿ ಪ್ರವಾಹದ ಮುನ್ನೆಚ್ಚರಿಕೆಯಾಗುತ್ತದೆ ಎಂದು ವಿಶ್ಲೇಷಿಸಿದ್ದಾರೆ. ‘‘ಪಾರಿವಾಳಗಳು ಹಾಗೂ ಎರಡು ನಿರ್ದಿಷ್ಟ ಬಗೆಯ ಹಕ್ಕಿಗಳು ಕೂಡಾ ತಮ್ಮ ಕೂಗಿನ ಮೂಲಕ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತವೆ’’ ಎಂದು ಲೂಧಿಯಾನಾ ಮೂಲದ ಕೇಂದ್ರೀಯ ಕೊಯ್ಲೋತ್ತರ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿ ಅರ್ಮಾನ್ ಯು. ಮುಝಾದದ್ದಿ ಸಂಶೋಧನಾ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ನೆಲಗಪ್ಪೆಗಳು ಧಾರಾಕಾರ ಮಳೆ ಹಾಗೂ ವ್ಯಾಪಕ ಪ್ರವಾಹಕ್ಕೆ ಮುನ್ನ ನಿರಂತರವಾಗಿ ಕೂಗುತ್ತಲೇ ಇರುತ್ತವೆ.
‘‘ದೇಶೀಯ ತಾಂತ್ರಿಕ ಜ್ಞಾನವು ಅಸ್ಸಾಂನ ಧೇಮಜಿ ಜಿಲ್ಲೆಯಲ್ಲಿ ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ಸಾಮಾನ್ಯವಾಗಿದ್ದು, ಮೀನುಗಾರರು ಹಾಗೂ ಜನಸಾಮಾನ್ಯರ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ’’ ಎಂದು ವರದಿ ವಿವರಿಸಿದೆ.
‘‘ಶತಮಾನಗಳಿಂದೀಚೆಗೆ ಧೇಮಜಿ ಜಿಲ್ಲೆಯ ಜನ, ಇಂಥ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತಮ್ಮದೇ ಅನುಭವ ಹಾಗೂ ವೀಕ್ಷಣೆಯ ವಿಧಾನವನ್ನು ಅನುಸರಿಸಿಕೊಂಡು ಬಂದಿದ್ದಾರೆ. ಇಂಥ ಕ್ರಮಗಳು ಹಾಗೂ ತಂತ್ರಗಳು ಆಯಾ ಪ್ರದೇಶಕ್ಕೆ ನಿರ್ದಿಷ್ಟವಾಗಿರುತ್ತವೆ. ಯಾವ ಬಾಹ್ಯ ಸಹಾಯ ಅಥವಾ ಬೆಂಬಲವೂ ಇಲ್ಲದೆ ಅವರು ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ’’ ಎಂದು ವಿಜ್ಞಾನಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಪ್ರವಾಹ ಅಪಾಯ ಇರುವ ಮೂರು ಬ್ಲಾಕ್‌ಗಳ ಮೀನುಗಾರರು ಮತ್ತು ಜನಸಾಮಾನ್ಯರನ್ನು ಸಂದರ್ಶಿಸಿ, ಮಾಹಿತಿ ಪಡೆದು, ಈ ಗುಂಪು ಅಧ್ಯಯನ ಕೈಗೊಂಡಿತ್ತು.
ಪ್ರತಿ ವರ್ಷದ ಮುಂಗಾರಿನಲ್ಲಿ ಧಾರಾಕಾರ ಮಳೆ ಮತ್ತು ಇದರ ಪರಿಣಾಮವಾಗಿ ಭೀಕರ ಪ್ರವಾಹ ಇಲ್ಲಿ ಸಾಮಾನ್ಯ. ದೈತ್ಯ ಬ್ರಹ್ಮಪುತ್ರಾ ನದಿಯ ಪ್ರವಾಹ, ಅಸ್ಸಾಂನ ಧೇಮಜಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಮಾಡುತ್ತದೆ. ಇದು ರಾಜ್ಯದ ವ್ಯಾಪಕ ಪ್ರವಾಹಪೀಡಿತ ಪ್ರದೇಶಗಳಲ್ಲೊಂದು. ಕೃಷಿ ಬೆಳೆಗಳು ನಷ್ಟವಾಗುವುದಲ್ಲದೇ, ಗ್ರಾಮಗಳ ಬಹುತೇಕ ಮನೆಗಳು ಜಲಾವೃತವಾಗುತ್ತವೆ; ಆರೋಗ್ಯ ಸಮಸ್ಯೆಗಳು ವ್ಯಾಪಕವಾಗಿ ಕಾಡುತ್ತವೆ. ಹೊಲ ಗದ್ದೆಗಳಲ್ಲಿ ನಿರಂತರ ನೀರು ನಿಲ್ಲುವುದರಿಂದಾಗಿ ಮುಂದಿನ ಬೆಳೆ ಋತುವಿನ ವಿಳಂಬವೂ ಇಲ್ಲಿ ಸಾಮಾನ್ಯ. ಜಿಲ್ಲೆಯ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ಮಿಸಿಂಗ್, ಬೋಡೊ, ರಬ್ಕಾ ಮತ್ತಿತರ ಜನಾಂಗಕ್ಕೆ ಸೇರಿದವರು. ಇವರು ಭಾರಿ ಮಳೆ ಮತ್ತು ಪ್ರವಾಹದ ಮುನ್ಸೂಚನೆಗೆ ಪ್ರಾಣಿಗಳ ನಡವಳಿಕೆಯನ್ನು ವೀಕ್ಷಿಸುವುದರ ಜತೆಗೆ, ಆಕಾಶ, ಪ್ರಕೃತಿ ಮತ್ತು ಹವಾಮಾನ ಬದಲಾವಣೆಯ ಆಧಾರದಲ್ಲೂ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಅಂದಾಜಿಸುತ್ತಾರೆ.
ಮುಂಗಾರು ಮಳೆ ದಕ್ಷಿಣಕ್ಕೆ ವ್ಯಾಪಕವಾಗಿ ಬೀಳುತ್ತದೆ ಹಾಗೂ ಬೇಸಿಗೆ ಆರಂಭಕ್ಕೆ ಮುನ್ನ ಭಾರಿ ಪ್ರಮಾಣದಲ್ಲಿ ಬಿದಿರು ಹೂಬಿಡುತ್ತದೆ. ಇದು ಭವಿಷ್ಯದಲ್ಲಿ ಭೀಕರ ಪ್ರವಾಹ ಬರುವುದರ ಮುನ್ಸೂಚನೆ ಎಂದು ವರದಿ ವಿವರಿಸಿದೆ.
ನೈಸರ್ಗಿಕ ವಿಕೋಪಕ್ಕೆ ಮುನ್ನ ಪ್ರಾಣಿಗಳ ವಿಚಿತ್ರ ನಡವಳಿಕೆ ಹಾಗೂ ಸಂಕೇತಗಳನ್ನು ಹಲವು ದೇಶಗಳಲ್ಲಿ ಅವುಗಳ ವೈಜ್ಞಾನಿಕತೆ ಆಧಾರದಲ್ಲಿ ಅಧ್ಯಯನ ಮಾಡಲಾಗುತ್ತಿದೆ.
ಇಂತಹ ತಂತ್ರಜ್ಞಾನವನ್ನು ಸಮರ್ಪಕವಾಗಿ ವಿಶ್ಲೇಷಿಸಿ, ಇವುಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವುದರ ಹಿಂದೆ ವೈಜ್ಞಾನಿಕ ತತ್ವಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದೂ ಸಂಶೋಧಕರು ಸಲಹೆ ಮಾಡಿದ್ದಾರೆ.
ಇಂತಹ ವೈಜ್ಞಾನಿಕ ವಿಶ್ಲೇಷಣೆ ನಡೆದರೆ, ಇಂದಿನ ಆಧುನಿಕ ವಿಜ್ಞಾನದ ಜ್ಞಾನವನ್ನು ಬಳಸಿಕೊಂಡು ಹಾಲಿ ಇರುವ ಪ್ರವಾಹ ಮುನ್ಸೂಚನೆ ತಂತ್ರಜ್ಞಾನಗಳನ್ನು ಇನ್ನಷ್ಟು ಸುಧಾರಿಸಬಹುದಾಗಿದೆ. ಆಗ ಇವುಗಳನ್ನು ಇಂಥದ್ದೇ ಸಮಸ್ಯೆ ಇರುವ ಇತರ ಭಾಗಗಳಿಗೆ ಸುಲಭವಾಗಿ ವಿಸ್ತರಿಸಬಹುದಾಗಿದೆ ಎನ್ನುವುದು ಮುಝಾದದ್ದಿ ಅವರ ಸ್ಪಷ್ಟ ಅಭಿಮತ.

.jpg)







