ಗುಜರಾತ್‌ನಲ್ಲಿ ಗೋಸಂರಕ್ಷಣೆಗೆ ವಾಟ್ಸ್ ಆ್ಯಪ್ ಜಾಲ

ಇಂಜಿನಿಯರ್‌ಗಳು, ಭೂವ್ಯವಹಾರ ಉದ್ಯಮಿಗಳು ಹಾಗೂ ಖಾಸಗಿ ವೃತ್ತಿನಿರತರು ಸೇರಿದಂತೆ 10 ಸಾವಿರ ಮಂದಿಯ ಪ್ರಬಲ ಗೋ ಸಂರಕ್ಷಣಾ ಜಾಲ ಗುಜರಾತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೇವಲ ಒಂದು ವಾಟ್ಸ್ ಆ್ಯಪ್ ಮೆಸೇಜ್ ಆಥವಾ ಒಂದು ದೂರವಾಣಿ ಕರೆಯ ಆಧಾರದಲ್ಲಿ ಗೋವುಗಳನ್ನು ವಧಾಲಯಕ್ಕೆ ಸಾಗಿಸಲಾಗುತ್ತಿದೆ ಎಂಬ ಗುಮಾನಿಯಿಂದ ಅಂಥ ವಾಹನಗಳನ್ನು ತಡೆದು ದಾಳಿ ಮಾಡುವ ವ್ಯವಸ್ಥಿತ ಜಾಲ ರೂಪುಗೊಂಡಿದೆ.
‘ಗೋರಕ್ಷಕ ದಳ’ ಎಂಬ ವಿಸ್ತೃತ ಸಂಘಟನೆಯಡಿ, ನಾಲ್ಕು ಗೋಸಂರಕ್ಷಣಾ ಪಡೆಗಳು 50ಕ್ಕೂ ಹೆಚ್ಚು ಇಂಥ ಗುಂಪುಗಳನ್ನು ರಚಿಸಿಕೊಂಡು ಗುಜರಾತ್‌ನ ಎಲ್ಲ 33 ಜಿಲ್ಲೆಗಳಲ್ಲಿ ಸಕ್ರಿಯವಾಗಿವೆ. ಆದರೆ ಇತ್ತೀಚೆಗೆ ಗೋಸಂರಕ್ಷಕರಿಂದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬಳಿಕ, ಗೋ ಸಂರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಇವು ಈಗ ನೇಪಥ್ಯಕ್ಕೆ ಸರಿದಿವೆ.
ಕಳೆದ ನಾಲ್ಕು ವರ್ಷಗಳಲ್ಲಿ, ಗೋರಕ್ಷಕ ದಳ, ಅಖಿಲ ಭಾರತೀಯ ನವಯುಗ ಸಂಸ್ಥಾ, ಅಖಿಲ ಭಾರತೀಯ ಸರ್ವೋದಯ ಗೋರಕ್ಷ ಮಹಾ ಅಭಿಯಾನ ಸಮಿತಿ ಸೇರಿದಂತೆ ಇಂಥ ಬ್ರಿಗೇಡ್‌ಗಳ ಸದಸ್ಯರು ಸುಮಾರು 400 ಎಫ್‌ಐಆರ್‌ಗಳನ್ನು ದಾಖಲಿಸಿ, ಹಸು ಹಾಗೂ ಗೋಪೀಳಿಗೆಯನ್ನು ‘ಸಂರಕ್ಷಿಸಿದೆ’. ಇಂಥ ಸಂರಕ್ಷಕರು ಹಾಗೂ ಸಾಗಾಣೆದಾರರ ಮಧ್ಯೆ ಕೆಲ ಘರ್ಷಣೆಗಳೂ ಸಂಭವಿಸಿದೆ. ಬಹುತೇಕ ಇಂಥ ದಾಳಿಗಳು ನಡೆದಿರುವುದು ಅಲ್ಪಸಂಖ್ಯಾತರ ವಿರುದ್ಧ ಎಂದು ಪೊಲೀಸ್ ವರದಿಗಳು ಹೇಳುತ್ತವೆ.
ಇಂತಹ ಗುಂಪುಗಳ ಸದಸ್ಯರು ಸಾಮಾನ್ಯವಾಗಿ, ಮಾಹಿತಿಯ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಳ್ಳುವುದು ಹಾಗೂ ನಿಯಮ ಉಲ್ಲಂಘಿಸುವವರ, ಶಂಕಿತ ಜಾನುವಾರು ವ್ಯಾಪಾರಿಗಳನ್ನು ಬಂಧಿಸುವ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ. ಇದಕ್ಕೆ ಸರಕಾರದಿಂದ ಪ್ರಶಸ್ತಿಗಳನ್ನೂ ಪಡೆಯುತ್ತಾರೆ. ಗುಜರಾತ್‌ನಲ್ಲಿ, ಗುಜರಾತ್ ಪ್ರಾಣಿ ಸಂರಕ್ಷಣಾ (ತಿದ್ದುಪಡಿ) ಕಾಯ್ದೆ- 2011ರ ಅನ್ವಯ ಗೋ ಸಂತತಿಯ ಮಾರಾಟ ಹಾಗೂ ವಧೆ ಶಿಕ್ಷಾರ್ಹ ಅಪರಾಧ.
‘‘ಉನಾದಲ್ಲಿ ನಡೆದದ್ದು ಕೂಡಾ ಶೋ ಆಫ್. ನಾವು ಜಾನುವಾರು ಮಾರಾಟದಲ್ಲಿ ನಿರತರಾದ ಹಿಂದೂಗಳ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ. ನಮಗೆ ಹಿಂದುತ್ವದಲ್ಲಿ ನಂಬಿಕೆ ಇದೆ. ಆದರೆ ಯಾವುದೇ ರಾಜಕೀಯ ಪಕ್ಷಗಳಿಗೆ ನಾವು ಸೇರಿಲ್ಲ’’ ಎಂದು ನೇಹಾ ಪಟೇಲ್ ಎಂಬ ವಡೋದರದ ಎಂಬಿಎ ಪದವೀಧರೆ ವಿವರಿಸುತ್ತಾರೆ.
‘‘ನಮ್ಮ ಶೇಕಡ 50ರಷ್ಟು ಮಾಹಿತಿದಾರರು ಮುಸ್ಲಿಮರು. ಆದರೆ ಉನಾ ಘಟನೆಯಂಥ ಸಂದರ್ಭದಲ್ಲಿ, ಮಾಹಿತಿದಾರರ ಬಗ್ಗೆ ನಾವು ಬಹಳಷ್ಟು ಎಚ್ಚರ ವಹಿಸಬೇಕಾಗುತ್ತದೆ’’ ಎಂದು ಅವರು ಹೇಳುತ್ತಾರೆ. ಗುಜರಾತ್‌ನ ಏಕೈಕ ಮಹಿಳಾ ಗೋರಕ್ಷಕಿ ಎಂಬ ಹೆಗ್ಗಳಿಕೆ ಈಕೆಯದ್ದು. ‘‘ರಾಜ್ಯದಲ್ಲಿ ಗೋಸಾಗಾಟದ ಟ್ರಕ್ ಹಿಡಿಯಲು ರಾತ್ರಿ 2 ಗಂಟೆಗೆ ಕೂಡಾ ಹೆದ್ದಾರಿಗಳಲ್ಲಿ ಮಹಿಳೆ ಒಬ್ಬಂಟಿಯಾಗಿ ನಿಲ್ಲುವಷ್ಟು ಸುರಕ್ಷತೆ ರಾಜ್ಯದಲ್ಲಿದೆ’’ ಎಂದು ಆಕೆ ಪ್ರತಿಪಾದಿಸುತ್ತಾರೆ.
‘‘ನಾನು ಸದಾ ಸಿದ್ಧ; ಸಂಶಯಾಸ್ಪದ ವಾಹನ ಓಡಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ ಕ್ಷಣಮಾತ್ರದಲ್ಲೇ, ನಾನು ಆ ಜಾಗಕ್ಕೆ ಧಾವಿಸುತ್ತೇನೆ. ಆ ಸ್ಥಳಕ್ಕೆ ಹತ್ತಿರವಾಗಿರುವ ಸ್ವಯಂಸೇವಕರಿಗೆ ಕೂಡಾ ನಾವು ಮಾಹಿತಿ ನೀಡುತ್ತೇವೆ. ಹೀಗೆ ಗೋಸಂತತಿ ಉಳಿಸುತ್ತೇವೆ’’ ಎನ್ನುವುದು ಅಹ್ಮದಾಬಾದ್‌ನ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುವ ಪ್ರತೀಕ್ ಅಹೀರ್ ಎಂಬವರ ಹೇಳಿಕೆ. ‘‘ಸ್ವಯಂಸೇವಕರು ಸಾಮಾನ್ಯವಾಗಿ ತಮ್ಮ ಸುರಕ್ಷೆಗಾಗಿ ಮರದ ಬಡಿಗೆಗಳನ್ನು ಇಟ್ಟುಕೊಂಡಿರುತ್ತಾರೆ. ಗೋಸಂರಕ್ಷಣೆಗಾಗಿ ನನ್ನ ಕೆಲಸವನ್ನು ಬಿಡಲು ಕೂಡಾ ನಾನು ಹಿಂಜರಿಯುವುದಿಲ್ಲ’’ ಎನ್ನುವುದು ಅವರ ಸ್ಪಷ್ಟ ನುಡಿ.
‘‘ನಾವು ಪೊಲೀಸರಿಗೆ ಸುಳಿವು ನೀಡುತ್ತೇವೆ. ಪೊಲೀಸರೂ ನಮಗೆ ಇಂಥ ಸುಳಿವನ್ನು ನೀಡುತ್ತಾರೆ. ನಮ್ಮ ಗುರಿ ಒಂದೇ ಗೋಸಂರಕ್ಷಣೆ’’ ಎಂದು ಗುಜರಾತ್ ಗೋರಕ್ಷಕ್ ದಳದ ಅಧ್ಯಕ್ಷ ಹಾಗೂ ಗುಜರಾತ್ ಗೋಸೇವಾ ಆ್ಯಂಡ್ ಗೋಚಾರ ವಿಕಾಸ ಬೋರ್ಡ್‌ನಿಂದ 2012ರಲ್ಲಿ ‘ಉತ್ತಮ ಗೋರಕ್ಷಕ ಪ್ರಶಸ್ತಿ’ ಪುರಸ್ಕೃತರಾಗಿರುವ ಮಯೂರ ಠಕ್ಕರ್ ಹೇಳುತ್ತಾರೆ.
‘‘ಘರ್ಷಣೆಗಳು ನಡೆಯಬಹುದು...ನಮ್ಮ ಸ್ವಯಂಸೇವಕರು ಗಾಯಗೊಂಡಿದ್ದಾರೆ.. ಬಲಿಯಾದ ನಿದರ್ಶನವೂ ಇದೆ. ಆದರೆ ಉನಾದಲ್ಲಿ ವಾಸ್ತವವಾಗಿ ನಡೆದದ್ದೇ ಬೇರೆ. ಇದು ನಮಗೆ ದೊಡ್ಡ ಹಿನ್ನಡೆ’’ ಎಂದು ಕಚ್‌ನಲ್ಲಿ ಭೂ ವ್ಯವಹಾರ ವಹಿವಾಟು ನಡೆಸುತ್ತಿರುವ ಅವರು ಹೇಳುತ್ತಾರೆ.
‘‘ಗುಜರಾತ್ ಗೋರಕ್ಷಕ ದಳದ ಸುಮಾರು 300 ಮಂದಿ ಸಕ್ರಿಯ ಕಾರ್ಯಕರ್ತರು, ಉತ್ತರ ಗುಜರಾತ್ ಮತ್ತು ರಾಜಸ್ಥಾನ ಗಡಿಪ್ರದೇಶ, ದಕ್ಷಿಣ ಗುಜರಾತ್ ಹಾಗೂ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ. ಬಹಳಷ್ಟು ಟ್ರಕ್‌ಗಳಲ್ಲಿ ರಾಜಸ್ಥಾನ ಹಾಗೂ ಗುಜರಾತ್‌ನಿಂದ ಮುಂಬೈಗೆ ಜಾನುವಾರು ಸಾಗಿಸಲಾಗುತ್ತಿದ್ದು, ಅವು ಈ ಮಾರ್ಗದ ಮೂಲಕವೇ ಹಾದು ಹೋಗಬೇಕು. ಆದ್ದರಿಂದ ಅಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ’’ ಎಂದು ಅವರು ವಿವರಿಸುತ್ತಾರೆ.
‘‘ಪ್ರತಿ ಶುಕ್ರವಾರ ಹಾಗೂ ಶನಿವಾರದಂದು ಮುಂಜಾನೆ ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ಗೋಮಾಂಸ ಸಾಗಿಸುವ ಸಾಧ್ಯತೆ ಅಧಿಕ’’ ಎಂದು ಠಕ್ಕರ್ ಹೇಳುತ್ತಾರೆ. ಅದರಲ್ಲೂ ಮುಖ್ಯವಾಗಿ ಗಡಿಗೆ ಹೊಂದಿಕೊಂಡ ಜಿಲ್ಲೆಗಳಾದ ಪಂಚಮಹಲ್, ಬರೂಚ್ ಹಾಗೂ ವಡೋದರದಿಂದ ಹೆಚ್ಚು ಘರ್ಷಣೆಗಳು ವರದಿಯಾಗುತ್ತಿವೆ.
ಕೃಪೆ: ಹಿಂದೂಸ್ತಾನ್ ಟೈಮ್ಸ್









