ರೋಜರ್ಸ್ ಕಪ್: ಜೊಕೊವಿಕ್ ಮೂರನೆ ಸುತ್ತಿಗೆ ಲಗ್ಗೆ
ಟೊರಾಂಟೊ, ಜು.28: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ರೋಜರ್ಸ್ ಕಪ್‌ನಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಅವರು ಲುಕ್ಸಂಬರ್ಗ್‌ನ ಗಿಲ್ಲೆಸ್ ಮುಲ್ಲರ್ ವಿರುದ್ಧ 7-5, 7-6(3) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
ವಿಂಬಲ್ಡನ್ ಟೂರ್ನಿಯಲ್ಲಿ ಅಮೆರಿಕದ ಸ್ಯಾಮ್ ಕೆರ್ರಿ ವಿರುದ್ಧ ಮೂರನೆ ಸುತ್ತಿನಲ್ಲಿ ಸೋತು ಆಘಾತ ಅನುಭವಿಸಿದ ಬಳಿಕ ಇದೇ ಮೊದಲ ಬಾರಿ ಪಂದ್ಯ ಆಡುತ್ತಿದ್ದಾರೆ. ಟೈ-ಬ್ರೇಕರ್‌ನಲ್ಲಿ 3-1 ಹಿನ್ನಡೆ ಕಂಡಿದ್ದ ಜೊಕೊವಿಕ್ ಒಂದು ಗಂಟೆ, 43 ನಿಮಿಷಗಳಲ್ಲಿ ಜಯ ಸಾಧಿಸಿದರು.
ಮಾರ್ಚ್‌ನ ಬಳಿಕ ಮೊದಲ ಬಾರಿ ಹಾರ್ಡ್‌ಕೋರ್ಟ್‌ನಲ್ಲಿ ಆಡಲು ಕಷ್ಟವಾಯಿತು. ಇಲ್ಲಿ ಬಿಸಿಯಾದ ವಾತಾವರಣ ಇದ್ದ ಕಾರಣ ಚೆಂಡು ವೇಗವಾಗಿ ಚಲಿಸುತ್ತಿತ್ತು ಎಂದು ಜೊಕೊವಿಕ್ ತಿಳಿಸಿದ್ದಾರೆ.
ಮೂರು ಬಾರಿ ಕೆನಡಾ ಮಾಸ್ಟರ್ಸ್ ಪ್ರಶಸ್ತಿಯನ್ನು ಜಯಿಸಿರುವ ಸರ್ಬಿಯ ಆಟಗಾರ ಮುಂದಿನ ಸುತ್ತಿನಲ್ಲಿ ಝೆಕ್‌ನ ರಾಡೆಕ್ ಸ್ಟೆಪೆನೆಕ್‌ರನ್ನು ಎದುರಿಸಲಿದ್ದಾರೆ.
Next Story





