ತುಳು ಚಿತ್ರರಂಗದಲ್ಲಿ ಪೈರಸಿ ಹಾವಳಿ
ತುಳು ನಾಟಕ ಕಲಾವಿದರ ಒಕ್ಕೂಟ ಖಂಡನೆ
ಮಂಗಳೂರು, ಜು.28: ತುಳು ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ ಹಾವಳಿಯ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ತುಳು ನಾಟಕ ಕಲಾವಿದರ ಒಕ್ಕೂಟ, ತೆರೆ ಕಾಣುವ ಮೊದಲೇ ತುಳು ಚಿತ್ರ ‘ದಬಕ್ ದಬಾ ಐಸಾ’ ಚಿತ್ರ ಸೋರಿಕೆಯಾಗಿರುವ ಕುರಿತಂತೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಬಗ್ಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, 45 ವರ್ಷಗಳ ಇತಿಹಾಸ ಹೊಂದಿರುವ ತುಳು ಸಿನೆಮಾರಂಗದಲ್ಲಿ ಈವರೆಗೆ ಸುಮಾರು 70ರಷ್ಟು ಚಿತ್ರಗಳು ತೆರೆಕಂಡಿವೆ. ಆದರೆ ಇದೀಗ ತುಳು ಚಿತ್ರ ವೊಂದು ಬಿಡುಗಡೆಗೆ ಮುನ್ನವೇ ಪೈರಸಿಗೆ ತುತ್ತಾಗಿರುವುದು ತುಳು ಚಿತ್ರರಂಗದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಷಡ್ಯಂತ್ರವಾಗಿದೆ ಎಂದರು. ಈ ಬಗ್ಗೆ ಈಗಾಗಲೇ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕ್ಷೇಮನಿಧಿ ಸಂಚಾಲಕ ಪ್ರದೀಪ್ ಆಳ್ವ, ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರ್, ಕೋಶಾಧಿಕಾರಿ ಮೋಹನ್ ಕೊಪ್ಪಲ ಉಪಸ್ಥಿತರಿದ್ದರು.





