ಆಲಪ್ಪುಳದ ಬೀಚ್ ನಲ್ಲಿ ವಿಮಾನದ ಅವಶೇಷ ಪತ್ತೆ

ಅಲಪ್ಪುಳ, ಜು.29: ಇಲ್ಲಿನ ಚೇತಿ ಬೀಚ್ ಸಮೀಪ ಗುರುವಾರ ಸಂಜೆ ವಿಮಾನದ ಅವಶೇಷಗಳು ಪತ್ತೆಯಾಗಿವೆ. ವಿಮಾನದ ಎರಡು ರೆಕ್ಕೆಗಳು ಪತ್ತೆಯಾಗಿದ್ದು, ಇದರಲ್ಲಿ ಇಸ್ರೇಲ್ ಇಂಡಸ್ಟ್ರೀಸ್ ಲಿಮಿಟೆಡ್, ಐಎಐ ಮಾಲತ್ ಡಿವಿಷನ್, ಮಿಲಿಟರಿ ಏರ್‌ಕ್ರಾಪ್ ಗ್ರೂಪ್ ಎಂಬ ಹೆಸರಿದೆ ಎಂದು ಮರಾರಿಕುಳಂ ವೃತ್ತನಿರೀಕ್ಷಕ ಉಮೇಶ್ ಕುಮಾರ್ ಪ್ರಕಟಿಸಿದ್ದಾರೆ.
ಪತ್ತೆಯಾದ ರೆಕ್ಕೆಗಳು ಎರಡು ಮೀಟರ್ ಉದ್ದವಿದ್ದು, ಸ್ಥಳೀಯ ಮೀನುಗಾರರು ಇದನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚೆರ್ತಾಲ ಡಿಎಸ್ಪಿ ಎಂ.ರಮೇಶ್ ಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭಾರತೀಯ ನೌಕಾಪಡೆಗೆ ಮಾಹಿತಿ ನೀಡಿದ್ದಾರೆ. ಈ ಅವಶೇಷಗಳನ್ನು ಅರ್ತುನ್‌ಕಲ್ ಠಾಣೆಗೆ ಸ್ಥಳಾಂತರಿಸಲಾಗಿದೆ.
ಇದು ಯಾವ ವಿಮಾನದ ಅವಶೇಷಗಳು ಎಂಬ ಬಗ್ಗೆ ನಿಖರವಾಗಿ ಗೊತ್ತಿಲ್ಲ. ಕೊಚ್ಚಿನ್‌ನಿಂದ ಭಾರತೀಯ ನೌಕಾಪಡೆ ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಚಿತ್ರಗಳನ್ನು ವಾಟ್ಸಾಪ್‌ನಲ್ಲಿ ಹಾಕಿದ್ದೇವೆ. ನೌಕಾಪಡೆ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿದ ಬಳಿಕ ವಿವರ ಲಭ್ಯವಾಗಲಿದೆ ಎಂದು ಪೊಲೀಸರು ವಿವರಿಸಿದ್ದಾರೆ.





