ರೊಬೋಟ್‌ಗಳಿಂದ ಮಾನವರಷ್ಟೇ ಚೆನ್ನಾಗಿ ಶಸ್ತ್ರಚಿಕಿತ್ಸೆ ಸಾಧ್ಯ: ಅಧ್ಯಯನ

ಹೊಸದಿಲ್ಲಿ, ಜು.29: ನುರಿತ ಶಸ್ತ್ರಚಿಕಿತ್ಸಾ ತಜ್ಞರಷ್ಟೇ ಚೆನ್ನಾಗಿ ರೊಬೋಟ್ ಕೂಡಾ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಬಲ್ಲದು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಶಸ್ತ್ರಚಿಕಿತ್ಸೆಯ ಆಧುನಿಕ ತಂತ್ರಜ್ಞಾನವನ್ನು ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ಪದ್ಧತಿಯ ಜೊತೆ ತುಲನೆ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಸಮಗ್ರ ಪ್ರಯೋಗದಲ್ಲಿ, ಪ್ರಾಸ್ಟೇಟ್ (ಪುರುಷ ಜನನೇಂದ್ರಿಯಕ್ಕೆ ಸಂಬಂಧಿಸಿದ ಗ್ರಂಥಿ) ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ರೊಬೋಟ್ ನೆರವಿನ ಉದರದರ್ಶಕ ಪ್ರಾಸ್ಟೆಕ್ಟಮಿ ವಿಧಾನದಿಂದ ಗ್ರಂಥಿಗಳನ್ನು ತೆಗೆಯಲಾಯಿತು. ಇದು ಮೂರು ತಿಂಗಳ ಹಿಂದೆ ನುರಿತ ಶಸ್ತ್ರಚಿಕಿತ್ಸಾ ತಜ್ಞರು ನಿರ್ವಹಿಸಿದ ಇಂಥದ್ದೇ ಶಸ್ತ್ರಚಿಕಿತ್ಸೆಯಷ್ಟೇ ಉತ್ತಮವಾಗಿ ನಿರ್ವಹಿಸಿರುವುದು ತುಲನಾತ್ಮಕ ಅಧ್ಯಯನದಿಂದ ತಿಳಿದುಬಂದಿದೆ. ರೊಬೋಟ್ ಶಸ್ತ್ರಚಿಕಿತ್ಸೆ ವೇಳೆ, ರೋಗಿಗೆ ರಕ್ತಸ್ರಾವ ಆಗಿರುವುದು ಕಡಿಮೆ ಎಂಬ ಅಂಶವೂ ಅಧ್ಯಯನದಿಂದ ವ್ಯಕ್ತವಾಗಿದೆ.
ಇದಲ್ಲದೇ, ಶಸ್ತ್ರಚಿಕಿತ್ಸಾ ತಜ್ಞರಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ, ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲು ಹೆಚ್ಚು ಸಮಯ ಬೇಕಾಯಿತು ಎನ್ನುವುದು ಕೂಡಾ ಅಧ್ಯಯನದ ಇನ್ನೊಂದು ಮಹತ್ವದ ಅಂಶ. ಜೊತೆಗೆ ಒಂದು ವಾರದ ಬಳಿಕ ದೈನಂದಿನ ಕೆಲಸಗಳನ್ನು ನಿರ್ವಹಿಸುವಾಗ ಈ ರೋಗಿಗೆ ಹೆಚ್ಚು ನೋವಿನ ಅನುಭವವಾಗಿದೆ.
ಈ ಅಧ್ಯಯನವನ್ನು ಲ್ಯಾನ್ಸೆಟ್ ಮತ್ತು ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ರೊಬೋಟಿಕ್ ಶಸ್ತ್ರಚಿಕಿತ್ಸೆ ಅತ್ಯಾಧುನಿಕ ವಿಧಾನವಾಗಿದ್ದು, ಇದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಭಾರತೀಯ ವೈದ್ಯರು ಅಭಿಪ್ರಾಯಪಡುತ್ತಾರೆ.







