ಮಹಾಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ
ನಗರದ ಹಲವಡೆ ಟ್ರಾಫಿಕ್ ಜಾಮ್ , 10ಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೆರೆ ನೀರು

ಬೆಂಗಳೂರು, ಜು.29: ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಕಳೆದ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಂಗಳೂರು ತತ್ತರಗೊಂಡಿದೆ. ನಗರದ ಹಲವಡೆ ಟ್ರಾಫಿಕ್ ಜಾಮ್ ಆಗಿದೆ.
ನಗರದ 20ಕ್ಕೂ ಹೆಚ್ಚು ಕಡೆ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಎಲ್ಲಾ ರಿಂಗ್ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಆಗಿದೆ.
ಮಾಗಡಿ ರಸ್ತೆ, ಮಲ್ಲೆಶ್ವರಂ, ಯಶವಂತಪುರ, ಶೇಷಾದ್ರಿಪುರಂ, ಅಲಸೂರು, ಕೆ.ಆರ್.ಪುರ, ಹೆಬ್ಬಾಳ ಸೇರಿದಂತೆ ಹಲವಡೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಿಇಎಸ್ ಕಾಲೇಜು ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ವಾಹನ ಚಾಲಕರು ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ. ಕಚೇರಿ, ಶಾಲಾ, ಕಾಲೇಜುಗಳಿಗೆ ತೆರಳುವ ಮಂದಿ ತೊಂದರೆ, ಎದುರಿಸುವಂತಾಗಿದೆ. ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಕೋಡಿಚಿಕ್ಕನಹಳ್ಳಿ ಕೆರೆ ಭರ್ತಿಯಾಗಿದೆ. ಇದರಿಂದಾಗಿ ಹಲವಡೆ ನೆರೆ ನೀರು ನುಗ್ಗಿದೆ. ಕೋಡಿಚಿಕ್ಕನಹಳ್ಳಿ, ಮಂಜುನಾಥ್ ಲೇಔಟ್ ಮತ್ತಿತರ ಕಡೆಗಳಲ್ಲಿ ಮನೆ ಅಪಾರ್ಟ್‌ಮೆಂಟ್‌ಗಳಿಗೆ ನೆರೆ ನೀರು ನುಗ್ಗಿದೆ. ಕೋಡಿಚಿಕ್ಕನಹಳ್ಳಿ ರಸ್ತೆ ಕೆರೆಯಂತಾಗಿದೆ. ರಸ್ತೆಯಲ್ಲಿ ಮೂರರಿಂದ ನಾಲ್ಕರಷ್ಟು ಅಡಿ ನೆರೆ ನೀರು ನಿಂತಿದೆ. ಅಗ್ನಿಶಾಮಕದಳದ ಸಿಬಂದಿಗಳು ಕಾರ್ಯಾಚರಣೆ ನಡೆಸಿ ತೊಂದರೆಗೊಳಗಾದವರನ್ನು ರಕ್ಷಿಸುತ್ತಿದ್ದಾರೆ.10ಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗಳಿಗೆ ನೆರೆ ನೀರುನುಗ್ಗಿದೆ. ಕಟ್ಟಡದಲ್ಲಿ ಸಿಲುಕಿಕೊಂಡವರಿಗೆ ಬೋಟ್ ಮೂಲಕ ನೀರು ಹಾಗೂ ಆಹಾರದ ಪೊಟ್ಟಣವನ್ನು ತಲುಪಿಸಲಾಗುತ್ತಿದೆ.
ಎಲೆಕ್ಟ್ರಾನಿಕ್ಸ್ ಸಿಟಿ ಪಕ್ಕದ ಚಿಕ್ಕಬೇಗೂರು ಕೆರೆ ತುಂಬಿ ಹರಿಯುತ್ತಿದೆ.ಎಲೆಕ್ಟ್ರಾನಿಕ್ ಸಿಟಿ ವೀರಸಂದ್ರ ಜಂಕ್ಷನ್‍ನಲ್ಲಿ ಟ್ರಾಫಿಕ್ ಉಂಟಾಗಿದೆ. ರಾಮಮೂರ್ತಿ ನಗರದ ಫ್ಲೈ ಓವರ್ ಕೆಳಗಿನ ರಸ್ತೆ ಕೆರೆಯಂತಾಗಿದೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮತ್ತು ಜೆಪಿ ನಗರದ ಎರಡನೇ ಹಂತದಲ್ಲಿ ಮರ ಧರೆಗುರುಳಿದೆ.ಮಡಿವಾಳ ಕೆರೆ ತುಂಬಿ ನೀರು ರಸ್ತೆಗೆ ಬರುತ್ತಿದೆ. ನೀರಿನೊಂದಿಗೆ ಮೀನು ಬರುತ್ತಿದ್ದು, ಇದೇ ವೇಳೆ ಕೆಲವರು ಮೀನು ಹಿಡಿದು ಚೀಲಕ್ಕೆ ತುಂಬಿಕೊಳ್ಳುತ್ತಿದ್ದಾರೆ.
ಬಿಟಿಎಂಲೇಔಟ್ ನಲ್ಲಿ ಸಾಫ್ಟ್ ವೇರ‍್ ಕಂಪನಿ ಟಿಇಎಸ್ ಇಲೆಕ್ಟ್ರಾನಿಕ್ಸ್ ಸಲ್ಯೂಸನ್ಸ್ ಕಂಪನಿಯೊಂದಕ್ಕೆ ನೆರೆ ನೀರು ನುಗ್ಗಿದೆ. ಜನರೇಟರ್, ಬ್ಯಾಟರಿ ಕಾರುಗಳು ನೀರಿನಲ್ಲಿ ಮುಳುಗಿದೆ. ವಿದ್ಯುತ್ ಸಂಪರ್ಕ ಕಡಿದು ಹೋಗಿದೆ.ಹೊಂಗಸಂದ್ರದಲ್ಲಿ ನೀರು ತುಂಬಿ ಹರಿದು ಹಲವು ಮನೆಗಳಿಗೆ ನೀರು ನುಗ್ಗಿದೆ. ದುರ್ವಾಸನೆಯಿಂದ ಕೂಡಿರುವ ನೀರನ್ನು ಹೊರಹಾಕಲು ಜನರು ಪರದಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ರಾತ್ರಿ 4 ಸೆ.ಮೀ ಮಳೆ ಸುರಿದಿದೆ.







