ಕುವೈಟ್ ಸಂಸದನಿಗೆ 14 ವರ್ಷ ಜೈಲು ಶಿಕ್ಷೆ

ಕುವೈಟ್,ಜುಲೈ 29: ಕುವೈಟ್ ಸಂಸತ್ಸದಸ್ಯ ಅಬ್ದುಲ್ ಹಮೀದ್ ಅಲ್ ದಶ್ತಿಗೆ ಕ್ರಿಮಿನಲ್ ಕೋರ್ಟ್ ಹದಿನಾಲ್ಕುವರ್ಷ ಆರುತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ವರದಿಯಾಗಿದೆ.ನೆರೆ ದೇಶಗಳಾದ ಸೌದಿಅರೇಬಿಯ, ಬಹ್ರೈನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ಹೊರಡಿಸಿದೆ.ಸೌದಿ ಅರೇಬಿಯ ಆಡಳಿತಗಾರರು ಮತ್ತು ನಾಯಕರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಅವರಿಗೆ ಹನ್ನೊಂದು ವರ್ಷ ಆರು ತಿಂಗಳು ಜೈಲು, ಬಹ್ರೈನ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಮೂರುವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ ಫೆಬ್ರವರಿಯಲ್ಲಿ ಸಿರಿಯನ್ ಟಿವಿ ಚ್ಯಾನಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಸಂಸತ್ಸದಸ್ಯ ಸೌದಿ ಅರೇಬಿಯ ಮತ್ತು ಬಹ್ರೈನ್ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದರು ಎನ್ನಲಾಗಿದೆ. ಸೌದಿ ಅರೇಬಿಯ ಮತ್ತು ಬಹ್ರೈನ್ ಗಲ್ಫ್ ವಲಯಗಳ ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಚಟವಟಿಕೆಗಳಿಗೆ ನೆರವು ನೀಡುತ್ತಿವೆ ಎಂದು ಕುವೈಟ್ ಪಾರ್ಲಿಮೆಂಟ್‌ನ ಶಿಯಾ ವಿಭಾಗದ ಪ್ರಮುಖ ನಾಯರಾದ ಅಬ್ದುಲ್ ಹಮೀದ್ ಅಲ್ ದಶ್ತಿ ಆರೋಪಿಸಿದ್ದರು. ಇದರ ಆಧಾರದಲ್ಲಿ ಕುವೈಟ್ ವಿದೇಶ ಸಚಿವಾಲಯ ಕೋರ್ಟ್‌ನಲ್ಲಿ ಕೇಸು ದಾಖಲಿಸಿತ್ತು. ಬಹ್ರೈನ್ ವಿರುದ್ಧ ಅವರು ನೀಡಿದ ಹೇಳಿಕೆಗಾಗಿ ಅಲ್ಲಿನ ಪ್ರಾಸಿಕ್ಯೂಶನ್ ಆರೆಸ್ಟ್ ವಾರಂಟ್ ಹೊರಡಿಸಿತ್ತು. ಅವರನ್ನು ಇಂಟರ್‌ಫೋಲ್‌ನ ಸಹಾಯದಲ್ಲಿ ಬಂಧಿಸಿ ತಮಗೆ ಹಸ್ತಾಂತರಿಸಬೇಕೆಂದು ಹ್ರೈನ್ ಕುವೈಟನ್ನು ಆಗ್ರಹಿಸಿತ್ತು. ಆದರೆ ಸದ್ಯಅವರು ಬಂಧನದಿಂದ ತಪ್ಪಿಸಿಕೊಂಡಿದ್ದು ಭೂಗತರಾಗಿದ್ದಾರೆ. ಈ ನಡುವೆ ಸಿರಿಯಕ್ಕೆ ಹೋಗಿ ಅಧ್ಯಕ್ಷ ಬಶರುಲ್ ಅಸದ್‌ರನ್ನು ಸಂದರ್ಶಿಸಿದ ಫೋಟೊ ಮಾಧ್ಯಮಗಳಲ್ಲಿ ಪ್ರಕಟಗೊಂಡು ವಿವಾದ ಮತ್ತೆ ಭುಗಿಲೆದ್ದಿದೆ ಎಂದು ವರದಿ ತಿಳಿಸಿದೆ.







