ಬಿಜೆಪಿ ಪ್ಯಾಶಿಸ್ಟ್ ಪಕ್ಷವಲ್ಲ: ಪ್ರಕಾಶ್ ಕಾರಟ್!

ತಿರುವನಂತಪುರಂ,ಜುಲೈ 29: ಬಿಜೆಪಿಯನ್ನು ಪ್ಯಾಶಿಸ್ಟ್ ಪಾರ್ಟಿಯೆಂದು ಕರೆಯಲು ಸಾಧ್ಯವಿಲ್ಲ ಎಂದು ಸಿಪಿಐಎಂ ಮಾಜಿ ಪ್ರಧಾನಕಾರ್ಯದರ್ಶಿ ಪ್ರಕಾಶ್‌ಕಾರಟ್ ಹೇಳಿದ್ದಾರೆ ಎಂದು ವರದಿಯಾಗಿದೆ. ಸಿಪಿಐಎಂ ನಾಯಕತ್ವದ ನಡುವೆ ಉದ್ಭವಿಸಿರುವ ಭಿನ್ನಮತವನ್ನು ಅವರ ಈ ಹೇಳಿಕೆಯು ಪ್ರತಿನಿಧಿಸುತ್ತಿದೆ ಎನ್ನಲಾಗುತ್ತಿದೆ. ಪಶ್ಚಿಮಬಂಗಾಳದಲ್ಲಿ ಮೈತ್ರಿ ಮಾಡಿಕೊಂಡಂತೆ ಬಿಜೆಪಿಯನ್ನು ಪ್ರತಿರೋಧಿಸಲು ಕಾಂಗ್ರೆಸ್‌ನೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಿಪಿಐಎಂ ಮೈತ್ರಿ ಮಾಡಿಕೊಳ್ಳಬೇಕೆಂಬ ಪಶ್ಚಿಮಬಂಗಾಳ ರಾಜ್ಯಘಟಕ ಮತ್ತು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮುಂದಿಟ್ಟ ಆಶಯವನ್ನು ಕಾರಟ್ ದೇಶಾಭಿಮಾನಿ ಪತ್ರಿಕೆಯ ತನ್ನ ಕಾಲಂನಲ್ಲಿ ಈ ಹಿಂದೆಯೂ ಪ್ರಶ್ನಿಸಿದ್ದರು ಎಂದು ವರದಿ ತಿಳಿಸಿದೆ.
ಇದೀಗ ದೇಶಾಭಿಮಾನಿ ಪತ್ರಿಕೆಯು ತನ್ನಕಾಲಂನಲ್ಲಿ ಪ್ರಕಾಶ್ ಕಾರಟ್, "ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದ ರಾಜಕೀಯದಲ್ಲಿ ಹೆಚ್ಚಿರುವ ಬಲಪಂಥೀಯ ಪ್ರಭಾವವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ" ಎಂದು ಅವರು ಬರೆದಿದ್ದು, ಅದನ್ನು ಸರಿಯಾಗಿ ವಿವರಿಸಿದರೆ ಮಾತ್ರವೇ ಮೋದಿಸರಕಾರ ಮತ್ತು ಬಿಜೆಪಿ ವಿರುದ್ಧ ಸರಿಯಾದ ತಂತ್ರರೂಪಿಸಲು ಸಾಧ್ಯ ಹಾಗೂ ಅದರ ವಿರುದ್ಧ ಪ್ರತಿರೋಧವನ್ನು ಬೆಳೆಸಲು ಸಾಧ್ಯ ಎಂದು ಅವರು ತನ್ನ "ಪ್ಯಾಶಿಸಂ ಮತ್ತು ಭಾರತೀಯ ಆಡಳಿತವರ್ಗ" ಎಂಬ ಲೇಖನದಲ್ಲಿ ಬರೆದಿದ್ದಾರೆ ಎಂದು ವರದಿ ತಿಳಿಸಿದೆ.
ಅರೆ ಪ್ಯಾಶಿಸ್ಟ್ ಸಿದ್ಧಾಂತವನ್ನು ಹೊಂದಿರುವ ಆರೆಸ್ಸೆಸ್‌ನೊಂದಿಗೆ ಸಂಬಂಧ ಇರುವುದರಿಂದ ತನಗೆ ಪರಿಸ್ಥಿತಿ ಅನುಕೂಲವಾದರೆ ಬಿಜೆಪಿ ಸ್ವೇಚ್ಛಾಧಿಪತ್ಯದ ಪಕ್ಷವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಬಿಜೆಪಿ ಒಂದು ದಾರಿತಪ್ಪಿದ ಪಕ್ಷ ಎಂದು ಹೇಳಬಹುದು. ಪ್ಯಾಶಿಸ್ಟ್ ಪಕ್ಷ ಎಂದು ಹೇಳಲು ಸಾಧ್ಯವಿಲ್ಲ ಎಂದು ಕಾರಟ್ ಲೇಖನದಲ್ಲಿ ಬರೆದಿದ್ದಾರೆಂದು ವರದಿಯಾಗಿದೆ.







