ಹೊಸ ಟ್ರೆಂಡ್: ಕಾಫಿ ವಿದ್ ಕೋಕನಟ್ ಆಯಿಲ್!
ಕುತೂಹಲಕಾರಿ ಮಾಹಿತಿಗಳು
.jpg)
ಕಾಫಿಯೊಂದಿಗೆ ಏನು ಬೆರೆಸಿದರೆ ಚೆನ್ನ? ಇಂಥ ಪ್ರಯೋಗಗಳು ನಡೆಯುತ್ತಲೇ ಇವೆ. ಇದೀಗ ಹೊಸ ಸೇರ್ಪಡೆ ತೆಂಗಿನ ಎಣ್ಣೆ. ತೆಂಗಿನೆಣ್ಣೆ ಇದೀಗ ಮೈಗೆ ಹಚ್ಚಿಕೊಳ್ಳಲು ಮಾತ್ರ ಬಳಕೆಯಾಗುವುದಲ್ಲ. ಮುಂಜಾನೆಯ ಕಾಫಿ ಜತೆಗೆ ತೆಂಗಿನೆಣ್ಣೆ ಸೇರಿಸುವುದು ಆರೋಗ್ಯಕ್ಕೂ ಸಹಕಾರಿ. ಇದರಿಂದ ಈ ಪ್ರವೃತ್ತಿ ಹೆಚ್ಚುತ್ತಿದೆ. ತೆಂಗಿನೆಣ್ಣೆಯುಕ್ತ ಕಾಫಿ ಸೇವನೆಯಿಂದ ಏನು ಲಾಭ?
ಶಕ್ತಿದಾಯಕ:
ಬಹುತೇಕ ಮಂದಿ ಕಾಫಿಯ ಮೊರೆ ಹೋಗುವುದು, ದೇಹದ ಜಡ ಬಿಡಿಸಲು ಅಥವಾ ಕಿಕ್ ಪಡೆಯಲು. ಖಂಡಿತವಾಗಿಯೂ ಕಾಫಿ ಚೈತನ್ಯದಾಯಕ. ಆದರೆ ತೆಂಗಿನ ಎಣ್ಣೆ ಇನ್ನೂ ಪ್ರಯೋಜನಕಾರಿ. ಶುದ್ಧ ಕೊಬ್ಬರಿ ಎಣ್ಣೆಯನ್ನು ದೇಹ ಬಲುಬೇಗ ಹೀರಿಕೊಂಡು, ತಕ್ಷಣ ಹೆಚ್ಚಿನ ಶಕ್ತಿ ನೀಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ:
ಕಾಫಿ ಜತೆ ತೆಂಗಿನೆಣ್ಣೆ ಬೆರೆಸಿ ಸೇವಿಸುವುದು ನಿಮ್ಮ ಪಚನಕ್ರಿಯೆ ಸರಾಗವಾಗಲೂ ನೆರವಾಗುತ್ತದೆ. ತೆಂಗಿನೆಣ್ಣೆಯಲ್ಲಿರುವ ಮಧ್ಯಮ ಸರಣಿಯ ಟ್ರೈಗ್ಲಿಸರೈಡ್ ಕ್ಯಾಲೋರಿಗಳನ್ನು ನಿಮ್ಮ ದೇಹಕ್ಕೆ ಅಗತ್ಯವಾದ ಇಂಧನವಾಗಿ ಪರಿವರ್ತಿಸುತ್ತವೆ.
ನಿರೋಧಕ ಶಕ್ತಿಗೂ ಉತ್ತೇಜಕ:
ತೆಂಗಿನೆಣ್ಣೆಯಿಂದಾಗುವ ಆರೋಗ್ಯ ಲಾಭ ಅಷ್ಟಕ್ಕೇ ಸೀಮಿತವಲ್ಲ. ತೆಂಗಿನೆಣ್ಣೆಯಲ್ಲಿ ಇರುವ ಕೊಬ್ಬಿನ ಆಸಿಡ್‌ಗಳಲ್ಲಿ ಶೇಕಡ 50ರಷ್ಟು ಲೌರಿಕ್ ಆಸಿಡ್. ಇದು ಸಾಮಾನ್ಯವಾಗಿ ಎದೆಹಾಲಿನಲ್ಲಿರುತ್ತದೆ. ಈ ಆರೋಗ್ಯಕಾರಕ ಕೊಬ್ಬು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಫ್ಲೂ, ನೆಗಡಿ, ಕೆಮ್ಮಿಗೂ ಇದನ್ನು ಬಳಸಬಹುದು ಎಂದು ಸಂಶೋಧಕರು ಹೇಳುತ್ತಾರೆ.
ಮಾಡುವ ವಿಧಾನ:
ಸಾವಯವ ಕಾಫಿಪುಡಿಯನ್ನು ಬ್ಲೆಂಡರ್‌ನಲ್ಲಿ ಹಾಕಿ. ಒಂದು ಚಮಚದಷ್ಟು ಸಾವಯವ ತೆಂಗಿನೆಣ್ಣೆ ಬೆರೆಸಿ ಕುಡಿದರೆ ಅದರ ಮಜಾವೇ ಬೇರೆ. ರುಚಿಗಾಗಿ ಸಿಹಿ ತೆಂಗಿನ ಹರಳುಗಳನ್ನೂ ಬಳಸಬಹುದು.







