ಜರ್ಮನಿಯ ಫುಟ್ಬಾಲ್ ನಾಯಕ ಬಾಸ್ಟಿನ್ ಶ್ವೆನ್‌ಸ್ಟಿಗರ್ ನಿವೃತ್ತಿ

ಬರ್ಲಿನ್, ಜು.29: ಜರ್ಮನಿ ಫುಟ್ಬಾಲ್ ತಂಡದ ನಾಯಕ ಬಾಸ್ಟಿನ್ ಶ್ವೆನ್‌ಸ್ಟಿಗರ್ ಶುಕ್ರವಾರ ಅಂತಾರಾಷ್ಟ್ರೀಯ ವೃತ್ತಿಜೀವನದಿಂದ ನಿವೃತ್ತಿ ಘೋಷಿಸಿದ್ದಾರೆ.
31ರ ಹರೆಯದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಆಟಗಾರನಾಗಿರುವ ಬಾಸ್ಟಿನ್ ಜರ್ಮನಿಯ ಪರ 120 ಪಂದ್ಯಗಳನ್ನು ಆಡಿದ್ದರು. ಇತ್ತೀಚೆಗೆ ಯುರೋ ಕಪ್‌ನಲ್ಲಿ ಫ್ರಾನ್ಸ್ ವಿರುದ್ಧ ಜರ್ಮನಿ ಪರ ಕೊನೆಯ ಪಂದ್ಯ ಆಡಿದ್ದರು. ಆ ಪಂದ್ಯವನ್ನು ಜರ್ಮನಿ 0-2 ಅಂತರದಿಂದ ಸೋತಿತ್ತು.
ಶುಕ್ರವಾರ ಅವರು ಅಧಿಕೃತ ಟ್ವಿಟರ್‌ನಲ್ಲಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬಾಸ್ಟಿನ್‌ಗೆ ಜನವರಿಯಲ್ಲಿ ಮಂಡಿನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಯುರೋ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಮೊದಲು ಕೆಲವೇ ಪಂದ್ಯಗಳಲ್ಲಿ ಆಡಿದ್ದರು. ಯುರೋ ಟೂರ್ನಿಯಲ್ಲಿ ಉಕ್ರೇನ್ ವಿರುದ್ಧ ಮೊದಲ ಗ್ರೂಪ್ ಪಂದ್ಯದಲ್ಲಿ ಗೋಲು ಬಾರಿಸಿ ತನ್ನ ಪುನರಾಗಮನವನ್ನು ಸಾರಿದ್ದರು.
ಡಿಫೆಂಡರ್ ಬಾಸ್ಟಿನ್ 2018ರ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯ ಆರಂಭವಾಗಲು ಕೆಲವೇ ಸಮಯ ಬಾಕಿ ಇರುವಾಗ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ‘‘ಮುಂದಿನ ಪಂದ್ಯಗಳಲ್ಲಿ ನನ್ನನ್ನು ಆಯ್ಕೆಗೆ ಪರಿಗಣಿಸಬಾರದು ಎಂದು ಜರ್ಮನಿ ತಂಡದ ಮುಖ್ಯ ಕೋಚ್ ಜೋಕಿಮ್ ಲಾಗೆ ನಾನು ತಿಳಿಸಿದ್ದೆ. ನಾನು ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಅಭಿಮಾನಿಗಳು, ತಂಡದ ಆಟಗಾರು, ಜರ್ಮನಿ ಫುಟ್ಬಾಲ್ ಸಂಸ್ಥೆ ಹಾಗೂ ಇತರ ಕೋಚ್‌ಗಳಿಗೆ ಕೃತಜ್ಞತೆ ಸಲ್ಲಿಸುವೆ. 120 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ. ಅದೊಂದು ಸೊಗಸಾದ ಹಾಗೂ ಯಶಸ್ವಿ ಪಯಣವಾಗಿತ್ತು. 2014ರ ಫಿಫಾ ವಿಶ್ವಕಪ್ ಜಯಿಸಿರುವುದು ನನ್ನ ಪಾಲಿಗೆ ಐತಿಹಾಸಿಕ ಹಾಗೂ ಸ್ಮರಣೀಯ ಕ್ಷಣವಾಗಿತ್ತು’’ ಎಂದು ಬಾಸ್ಟಿನ್ ಹೇಳಿದ್ದಾರೆ.
ಬಾಸ್ಟಿನ್ 2004, 2008, 2012 ಹಾಗೂ 2016ರ ಯುರೋ ಚಾಂಪಿಯನ್‌ಶಿಪ್ ಹಾಗೂ 2006, 2010 ಹಾಗೂ 2014ರ ಫಿಫಾ ವಿಶ್ವಕಪ್‌ನಲ್ಲಿ ಜರ್ಮನಿ ತಂಡವನ್ನು ಪ್ರತಿನಿಧಿಸಿದ್ದರು.
2004ರ ಜೂನ್‌ನಲ್ಲಿ ಜರ್ಮನಿ ಪರ ಚೊಚ್ಚಲ ಪಂದ್ಯ ಆಡಿದ್ದ ಬಾಸ್ಟಿನ್ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ 38 ಪಂದ್ಯಗಳನ್ನು ಆಡಿದ್ದರು. ಫಿಫಾ ವಿಶ್ವಕಪ್‌ನಲ್ಲಿ 20 ಹಾಗೂ ಯುರೋ ಕಪ್‌ನಲ್ಲಿ 18 ಪಂದ್ಯಗಳನ್ನು ಆಡಿದ್ದಾರೆ.
ಯುರೋ ಕಪ್‌ನಲ್ಲಿ ಫ್ರಾನ್ಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಆಡಿದ ಬಾಸ್ಟಿನ್ ಜರ್ಮನಿಯ ಮಾಜಿ ಆಟಗಾರ ಮಿರೊಸ್ಲಾವ್ ಕ್ಲೋಸ್(37 ಪಂದ್ಯಗಳು) ಹೆಸರಲ್ಲಿದ್ದ ಅತ್ಯಂತ ಹೆಚ್ಚು ಪ್ರಮುಖ ಪಂದ್ಯಗಳನ್ನು ಆಡಿರುವ ದಾಖಲೆಯನ್ನು ಮುರಿದಿದ್ದರು.







