ಜಾಮ್ವಾ ಸೌದಿ ಅರೆಬಿಯಾ ವತಿಯಿಂದ ಜು.31ರಂದು ‘ಗಮ್ಮತ್’ ಸಾಮೂಹಿಕ ವಿವಾಹ

ಮಂಗಳೂರು, ಜು.29: ಜೋಕಟ್ಟೆಯ ಗಲ್ಫ್ ಅನಿವಾಸಿಗರ ಒಕ್ಕೂಟ ಜೋಕಟ್ಟೆ ಏರಿಯಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ಜಮ್ವಾ) ಸೌದಿ ಅರೆಬಿಯಾ ಹಾಗೂ ಅಂಜುಮಾನ್ ಖುವ್ವತುಲ್ ಇಸ್ಲಾಂ (ರಿ) ಜೋಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಗಮ್ಮತ್-2016 ಜು. 31ರಂದು ನಡೆಯಲಿದೆ ಎಂದು ಜಾಮ್ವಾ ಸೌದಿ ಅರೆಬಿಯಾ ದಮ್ಮಾಮ್ -ಜುಬೈಲ್ ಘಟಕದ ಅಧ್ಯಕ್ಷ ಅಬ್ದುರ್ರಹ್ಮಾನ್ ತಿಳಿಸಿದ್ದಾರೆ.
ಜೋಕಟ್ಟೆಯ ಅಂಜುಮಾನ್ ಕಾಲೇಜು ಸೆಮಿನಾರ್ ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಯಂ ಸೇವಕರ ಟೀಶರ್ಟ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜು.31ರಂದು ಬೆಳಗ್ಗೆ 9:30ಕ್ಕೆ ಜೋಕಟ್ಟೆಯ ಅಂಜುಮಾನ್ ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಜುಬೈಲ್ ಅಲ್ಮುಝೈನ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಝಕರಿಯ ಜೋಕಟ್ಟೆಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಉಪ ಸಮಿತಿಯೊಂದನ್ನು ರಚಿಸಿ ಊರಿನ ಎಲ್ಲಾ ಯುವಸಂಘಸಂಸ್ಥೆಗಳ ಬೆಂಬಲವನ್ನು ಕೋರಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಿಯಾದ್ ಜಾಮ್ವಾ ಕಾರ್ಯದರ್ಶಿ ಆಸಿಫ್, ಅಂಜುಮಾನ್ನ ಅಧ್ಯಕ್ಷ ರಶೀದ್ ಬಿ.ಎ. ಹಾಗೂ ಅಂಜುಮಾನ್ ಪದಾಧಿಕಾರಿಗಳು ಭಾಗವಹಿಸಿದ್ದರು.







