ಯುನಿಟಿ ಆಸ್ಪತ್ರೆಯಲ್ಲಿ ‘ಬರ್ತ್ ಆ್ಯಂಡ್ ಬಿಯೊಂಡ್’ ಚಿಕಿತ್ಸಾ ಘಟಕ ಶುಭಾರಂಭ

ಮಂಗಳೂರು, ಜು. 29: ಮಂಗಳೂರಿನಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ತಾಯಿ ಮತ್ತು ನವಜಾತ ಶಿಶುವಿನ (ಲೇಬರ್ ಥಿಯೇಟರ್) ಚಿಕಿತ್ಸಾ ಘಟಕ ‘ಬರ್ತ್ ಆ್ಯಂಡ್ ಬಿಯೊಂಡ್’ ನಗರದ ಯುನಿಟಿ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ.
ಯುನಿಟಿ ಆಸ್ಪತ್ರೆಯ ಚೆಯರ್‌ಮನ್ ಹಬೀಬ್ ರಹ್ಮಾನ್‌ರ ಪತ್ನಿ ಆಮಿನಾ ಹಬೀಬ್ ಅವರು ‘ಬರ್ತ್ ಆ್ಯಂಡ್ ಬಿಯೊಂಡ್’ ಘಟಕದ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಚೆಯರ್‌ಮನ್ ಹಬೀಬ್ ರಹ್ಮಾನ್, ಯುನಿಟಿ ಕೇರ್ ಆ್ಯಂಡ್ ಹೆಲ್ತ್ ಸರ್ವೀಸಸ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಅಜ್ಮಲ್ ಎಂ.ಹಬೀಬ್, ಕಾರ್ಯನಿರ್ವಾಹಕ ನಿರ್ದೇಶಕ ಅಶ್ಫಾಕ್ ಎಂ.ಹಬೀಬ್ ಹಾಗೂ ಕುಟುಂಬ ಸದಸ್ಯರು ಮತ್ತು ಯೆನೆಪೋಯ ವಿವಿಯ ಕುಲಪತಿ ವೈ.ಅಬ್ದುಲ್ಲಾ ಕುಂಞಿ, ಹಿರಿಯ ವೈದ್ಯರಾದ ದೇವಾಡಿಗ, ಎ.ವಿ.ಶೆಟ್ಟಿ ಸಹಿತ ಘಟಕದ ವೈದ್ಯರು ಉಪಸ್ಥಿತರಿದ್ದರು.
ಹೊಸ ತಂತ್ರಜ್ಞಾನ, ಹೊಸ ಪರಿಕಲ್ಪನೆ, ಹೊಸ ಮಾದರಿಯ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು ಒಂದೇ ಘಟಕದಲ್ಲಿ ಲಭ್ಯತೆಯೊಂದಿಗೆ ಆರಂಭಿಸಲಾಗಿದೆ. ಬರ್ತ್ ಆ್ಯಂಡ್ ಬಿಯೊಂಡ್ ಘಟಕದಲ್ಲಿ ಎಲ್ಲೇ ಓಡಾಡಿದರೂ ಆಸ್ಪತ್ರೆ ಎಂಬ ಭಾವನೆ ಮೂಡುವುದಿಲ್ಲ. ಅದಕ್ಕೆ ಬೇಕಾದ ಪರಿಸರವನ್ನು ಸೃಷ್ಟಿಸಲಾಗಿದೆ. ಇದೊಂದು ಲೇಬರ್ ಥಿಯೇಟರ್‌ನ ವಿನೂತನ ಪರಿಕಲ್ಪನೆಯಾಗಿದೆ.
ನವಜಾತ ಶಿಶುವಿನ ಚಿಕಿತ್ಸಾ ವಿಭಾಗದ, ಎಂಟು ಎನ್‌ಐಸಿಯು, ಬೇಬಿ ವಾರ್ಮರ್, ಎಚ್‌ಎ್ಓ ವೆಂಟಿಲೇಟರ್ ಮುಂತಾದ ಸೌಲಭ್ಯಗಳೊಂದಿಗೆ ಆರಂಭಗೊಂಡಿದೆ ಎಂದು ಯುನಿಟಿ ಕೇರ್ ಆ್ಯಂಡ್ ಹೆಲ್ತ್ ಸರ್ವೀಸಸ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಅಜ್ಮಲ್ ಎಂ. ಹಬೀಬ್ ತಿಳಿಸಿದ್ದಾರೆ. ಇಲ್ಲಿ ತಾಯಿ ಗರ್ಭಧರಿಸಿದ ದಿನದಿಂದ ಹಿಡಿದು ಮಗುವಿನ ಜನ್ಮದ ವರೆಗಿನ ಎಲ್ಲ ವಿಭಾಗದ ಚಿಕಿತ್ಸೆ, ಕೌನ್ಸಿಲಿಂಗ್, ಸಲಹೆ, ಮಾರ್ಗದರ್ಶನ ಸಿಗಲಿದೆ. ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಸಂಪೂರ್ಣ ತಪಾಸಣೆ ನಡೆಸಲು ಬೇಕಾದ ಅತ್ಯಾಧುನಿಕ ಸೌಲಭ್ಯ, ವೈದ್ಯರು ಹಾಗೂ ನರ್ಸಿಂಗ್ ಸೌಲಭ್ಯದಿಂದ ಕೂಡಿದೆ.
ಪ್ರತಿಯೊಂದು ಮಗುವಿನ ಬೆಡ್‌ನ ಮೇಲ್ಬಾಗದಲ್ಲಿ ಕ್ಯಾಮರ ಅಳವಡಿಸಲಾಗಿದೆ. ಈ ಕ್ಯಾಮರವನ್ನು ವೆಬ್‌ಗೆ ಲಿಂಕ್ ಮಾಡಲಾಗಿದೆ. ಪೋಷಕರಿಗೆ ಇದರ ಪಾಸ್‌ವರ್ಡ್ ನೀಡಲಾಗುತ್ತದೆ. ಇದರಿಂದಾಗಿ ಪೋಷಕರಿಗೆ ಅಥವಾ ದೂರದಲ್ಲಿರುವ ಸಂಬಂಧಿಕರು ಮಗುವಿನ ಪ್ರತಿಯೊಂದು ಹಂತವನ್ನು ನೋಡಬಹುದಾಗಿದೆ. ಚಿಕಿತ್ಸೆ ನೀಡುವ ವೈದ್ಯರೊಂದಿಗೆ ಇದೇ ಕ್ಯಾಮರದಲ್ಲಿ ಮಾತನಾಡಬಹುದಾಗಿದೆ. ಪ್ರಸವಕ್ಕೆ ಬರುವವರು ತಮಗೆ ಬೇಕಾದ ವೈದ್ಯರನ್ನು ಆಯ್ಕೆ ಮಾಡಬಹುದಾಗಿದೆ. ಇದರೊಂದಿಗೆ ಈ ಘಟಕದಲ್ಲಿ ದಿನದ 24 ಗಂಟೆಯೂ ಸೀರೋಗ ತಜ್ಞೆ ಕಾರ್ಯನಿರ್ವಹಿಸುತ್ತಿರುತ್ತಾರೆ ಎಂದವರು ತಿಳಿಸಿದ್ದಾರೆ,.







