ಔಷಧಿ ಬೆಲೆಗಳ ಮೇಲೆ ನಿಯಂತ್ರಣದಿಂದಾಗಿ ಬಳಕೆದಾರರಿಗೆ 5,000 ಕೋ.ರೂ.ಉಳಿತಾಯ

ಹೊಸದಿಲ್ಲಿ,ಜು.29: 2013ರ ಔಷಧಿ ಬೆಲೆ ನಿಯಂತ್ರಣ ಆದೇಶದಲ್ಲಿ ಸರಕಾರವು ಔಷಧಿಗಳ ಬೆಲೆಗಳನ್ನು ನಿಗದಿಗೊಳಿಸುತ್ತಿರುವುದರಿಂದ ಬಳಕೆದಾರರಿಗೆ ಸುಮಾರು 5,000 ಕೋ.ರೂ.ಗಳ ಉಳಿತಾಯವಾಗಿದೆ ಎಂದು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಅನಂತ ಕುಮಾರ್ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದರು.
2013ರ ಆದೇಶದಡಿ ಮಧುಮೇಹ,ಹೃದಯ ಸಂಬಂಧಿ ಕಾಯಿಲೆಗಳು, ಎಚ್‌ಐವಿ/ಏಡ್ಸ್, ಕ್ಷಯರೋಗ ಮತ್ತು ಕ್ಯಾನ್ಸರ್ ಔಷಧಿಗಳು ಸೇರಿದಂತೆ 530 ಔಷಧಿಗಳ ಬೆಲೆಗಳನ್ನು 2016,ಫೆ.29ರವರೆಗೆ ನಿಗದಿಗೊಳಿಸಲಾಗಿತ್ತು. ಬಳಿಕ ಜೂನ್ 2016ರವರೆಗೆ ಹೃದ್ರೋಗಗಳು,ಎಚ್‌ಐವಿ/ಏಡ್ಸ್ ಮತ್ತು ಕ್ಯಾನ್ಸರ್ ನಿಗ್ರಹ ಔಷಧಿಗಳು ಸೇರಿದಂತೆ ಇನ್ನೂ 404 ಔಷಧಿಗಳ ಬೆಲೆಗಳನ್ನು ನಿಗದಿಗೊಳಿಸಲಾಗಿದೆ. ಈ ಆದೇಶದಡಿ ಬೆಲೆ ನಿಯಂತ್ರಣದಿಂದಾಗಿ ಬಳಕೆದಾರರಿಗೆ ಒಟ್ಟು ಸುಮಾರು 4,988 ಕೋ.ರೂ.ಗಳ ಉಳಿತಾಯವಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.
ಅನುಸೂಚಿತ ಔಷಧಿಗಳಲ್ಲಿ ಪ್ರತಿಜೈವಿಕಗಳ ವ್ಯಾಪಕ ಶ್ರೇಣಿಯೂ ಒಳಗೊಂಡಿದೆ. ಜೊತೆಗೆ ಜನತೆಗೆ ಕೈಗೆಟಕುವ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ದೊರೆಯುವಂತಾಗಲು 375 ಜನೌಷಧಿ ಅಂಗಡಿಗಳನ್ನೂ ಸರಕಾರವು ಆರಂಭಿಸಿದೆ ಎಂದು ಸಚಿವರು ತಿಳಿಸಿದರು.





