‘ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಲು ನೂತನ ಆವಿಷ್ಕಾರ’
‘ರಾಗಿ, ಹಾಲು ವೌಲ್ಯವರ್ಧಿತ ತಯಾರಿಕೆ’ ಕುರಿತ ಕಾರ್ಯಾಗಾರ

ಸಾಗರ, ಜು.29: ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ನೂತನ ಆವಿಷ್ಕಾರವನ್ನು ನಡೆಸುತ್ತಿದೆ ಎಂದು ಕೃಷಿ ವಿಜ್ಞ್ಞಾನ ಕೇಂದ್ರದ ವಿಜ್ಞಾನಿ ಜ್ಯೋತಿ ಎಂ. ರಾಥೋಡ್ ಹೇಳಿದರು. ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಶಿವಮೊಗ್ಗ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ‘ರಾಗಿ ಮತ್ತು ಹಾಲು ವೌಲ್ಯವರ್ಧಿತ ತಯಾರಿಕೆ’ ಕುರಿತ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ರೈತ ಬೆಳೆಯುವ ಎಲ್ಲ ಬೆಳೆಗಳನ್ನು ಮೌಲ್ಯವರ್ಧಿತಗೊಳಿಸುವುದು ಹೇಗೆ ಎನ್ನುವ ಕುರಿತು ಶಿವಮೊಗ್ಗ ವಿಜ್ಞಾನ ಕೇಂದ್ರವು ಕಾಲಕಾಲಕ್ಕೆ ಒಳ ಆವರಣ ಹಾಗೂ ಬೇರೆಬೇರೆ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ತರಬೇತಿಯನ್ನು ನೀಡುತ್ತಾ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಣಬೆ ಹಾಗೂ ಅದರ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು. ಬದಲಾದ ದಿನಮಾನಗಳಲ್ಲಿ ಕೃಷಿ ಕುರಿತು ಯುವಜನಾಂಗ ನಿರಾಸಕ್ತಿ ವಹಿಸುತ್ತಿದೆ. ವಿದ್ಯಾವಂತರಾದ ತಕ್ಷಣ ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ಗ್ರಾಮೀಣ ಕೃಷಿ ಸೊರಗುತ್ತಿದೆ. ಇದನ್ನು ವಿದ್ಯಾರ್ಥಿ ಸಮೂಹಕ್ಕೆ ಮನದಟ್ಟು ಮಾಡುವುದು ಹಾಗೂ ಕೃಷಿಯತ್ತ ಯುವಜನರು ಹೊರಳುವಂತೆ ಮಾಡಲು ಇಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಥಮ ದರ್ಜೆ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ರಾಜು, ಮನುಷ್ಯ ಬದುಕಲು ಆರೋಗ್ಯ ಹಾಗೂ ಆರ್ಥಿಕತೆ ಅತಿಮುಖ್ಯ. ಶಿಕ್ಷಣವನ್ನು ಪಡೆದ ಮೇಲೆ ಎಲ್ಲರಿಗೂ ನೌಕರಿ ಸಿಗುವುದಿಲ್ಲ. ನಮ್ಮ ಬದುಕನ್ನು ನಾವು ರೂಪಿಸಿಕೊಳ್ಳಬೇಕು. ಸ್ವಯಂ ಉದ್ಯೋಗದ ಜೊತೆಗೆ ಕೃಷಿಯತ್ತಲೂ ಯುವಜನಾಂಗ ಆಸಕ್ತಿ ವಹಿಸಬೇಕು ಎಂದರು. ವೇದಿಕೆಯಲ್ಲಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವ.ಶಂ.ರಾಮಚಂದ್ರ ಭಟ್, ಪ್ರಾಧ್ಯಾಪಕಿ ಕವಿತಾ ಉಪಸ್ಥಿತರಿದ್ದರು ಎಂ.ಪಿ.ಅಣ್ಣಪ್ಪ ಕಾರ್ಯಕ್ರಮ ನಿರ್ವಹಿಸಿದರು.





