‘ಕಾರ್ಮಿಕರು ಸಂಘಟಿತರಾಗಿ ಸವಲತ್ತುಗಳನ್ನು ಪಡೆಯಿರಿ’
ಸದಸ್ಯತ್ವ ನೋಂದಣಿ ಕಾರ್ಯಕ್ರಮ

ವೀರಾಜಪೇಟೆ, ಜು.29: ಕಟ್ಟಡ ಕಾರ್ಮಿಕರು ಸಂಘಟಿತರಾಗಿ ತಮಗೆ ಸಿಗುವ ಸೌಲತ್ತು ಪಡೆಯಲು ಮುಂದಾಗಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಡಾ.ಐ.ಆರ್. ದುರ್ಗಾಪ್ರಸಾದ್ ಹೇಳಿದರು.
ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ನಗರ ಸಮಿತಿ ವತಿಯಿಂದ ಪಟ್ಟಣದ ದೊಡ್ಡಟ್ಟಿ ಚೌಕಿಯಲ್ಲಿ ಕಾರ್ಮಿಕರ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಲಕ್ಷಾಂತರ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಯಾವುದೇ ಭದ್ರತೆ ಇಲ್ಲದೆ ಇಂದಿಗೂ ದುಡಿಯುತ್ತಿದ್ದಾರೆ ಈ ಎಲ್ಲಾ ರಂಗದ ಕಾರ್ಮಿಕರನ್ನು ಸಂಘಟಿಸುವ ಕೆಲಸವನ್ನು ಸಿಐಟಿಯು ಸಂಘಟನೆ ಮಾಡುತ್ತಿದೆ ಎಂದರು.
ಕಟ್ಟಡ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಎ.ಸಿ.ಸಾಬು ಮಾತನಾಡಿ,
ಬಡ ಕಾರ್ಮಿಕರ ವರ್ಗಕ್ಕೆ ವಾಸಿಸಲು ಮನೆ ಇಲ್ಲದಂತಾಗಿದೆ. ದೇಶದ ಬೆನ್ನೆಲುಬು ಆಗಿರುವ ಕಾರ್ಮಿಕರ ಬಗ್ಗೆ ಸರಕಾರ ಗಮನಹರಿಸಿ ಸವಲತ್ತುಗಳನ್ನು ಕಾರ್ಮಿಕರಿಗೆ ಒದಗಿಸಿ ಕೊಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಹೇಮಂತ್, ಕಾರ್ಯದರ್ಶಿ ಕೆ.ಎಸ್.ರತೀಶ್, ಖಾಸಿಂ, ಆರ್.ನಾರಾಯಣ, ಎಸ್.ಚಂದ್ರಶೇಖರ್, ಮರೀಸ್ವಾಮಿ, ಎಂ.ಸುಬ್ರಮಣಿ, ಹರಿದಾಸ್, ಕಾರ್ಮಿಕರು ಉಪಸ್ಥಿತರಿದ್ದರು.







