ಮಹಾದಾಯಿ ನ್ಯಾಯಾಧೀಕರಣ: ಮರುಪರಿಶೀಲನೆಗೆ ಜಮಾಅತೆ ಇಸ್ಲಾಮೀ ಒತ್ತಾಯ

ಬೆಂಗಳೂರು, ಜು.29: ಕರ್ನಾಟಕ ರಾಜ್ಯದ ನ್ಯಾಯಬದ್ಧ ಮತ್ತು ನೈಜ ಬೇಡಿಕೆಯನ್ನು ಮುಂದಿಟ್ಟುಕೊಂಡು ಮಹಾದಾಯಿ ನ್ಯಾಯಾಧೀಕರಣ ತಮ್ಮ ಮಧ್ಯಂತರ ತೀರ್ಪನ್ನು ಮರುಪರಿಶೀಲಿಸಬೇಕಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಹೇಳಿದ್ದಾರೆ.
ಗದಗ, ರೋಣ, ನವಲಗುಂದ ಮತ್ತು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಸೇರಿದಂತೆ ಕುಡಿಯುವ ನೀರಿನ ತೀವ್ರಅಭಾವವಿರುವ ಪ್ರದೇಶಗಳ ನೀರಿನ ಕೊರತೆಯನ್ನು ನೀಗಿಸಲು ಕರ್ನಾಟಕ ರಾಜ್ಯವು ಮಹಾದಾಯಿ ನದಿಯ 199 ಟಿ.ಎಂ.ಸಿ ನೀರಿನಿಂದ ಕೇವಲ 7 ಟಿ.ಎಂ.ಸಿ ನೀರಿಗೆ ಮಾತ್ರ ಬೇಡಿಕೆಯನ್ನಿರಿಸಿದೆ.
ಕಳೆದ 20 ವರ್ಷಗಳಿಂದ ಮಲಪ್ರಭ ನದಿಯಲ್ಲೂ ನೀರಿನ ತೀವ್ರಅಭಾವ ಒಂದೆಡೆಯಾದರೆ ಮಹಾದಾಯಿ ನದಿಯ ನೀರನ್ನು ಎರಡು ರಾಜ್ಯಗಳು ಉಪಯೋಗಿಸದೆ ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಮೇಲಾಗಿ ಕಳಸಾ ಬಂಡೂರಿ ಯೋಜನೆಯಿಂದ ಗೋವಾದ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ. ತೀರ್ಪಿನ ಪುನರ್ ಪರಿಶೀಲನೆ ನಡೆಸುವಂತಾಗಲು ಕರ್ನಾಟಕರಾಜ್ಯ ಸರಕಾರವು ಹೆಚ್ಚಿನ ದಾಖಲೆಗಳನ್ನು ಒದಗಿಸಬೇಕು.ಅದರೊಂದಿಗೆ ಈ ಸಮಸ್ಯೆಗೆ ಪರಿಹಾರ ಕಾಣುವಂತಾಗಲು ಎರಡು ರಾಜ್ಯಗಳ ಎಲ್ಲಾ ಪಕ್ಷಗಳ ಸಂಯೋಜಿತ ಶ್ರಮವೂ ಅಗತ್ಯವಾಗಿದೆ ಎಂದವರು ತಿಳಿಸಿದ್ದಾರೆ.







