ಮೂಡುಪಡುಕೋಡಿ : ಮನೆಗೆ ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು

ವಿಟ್ಲ, ಜು.29: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ಹಲವು ಸಾಮಗ್ರಿಗಳನ್ನು ಕಳವುಗೈದ ಘಟನೆ ಪೂಂಜಾಲಕಟ್ಟೆ ಠಾಣಾ ವ್ಯಾಪ್ತಿಯ, ಮೂಡುಪಡುಕೋಡಿ ಗ್ರಾಮದಲ್ಲಿ ಗುರುವಾರ ತಡ ರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ಚಾಂದ್ ಸಾಹೇಬ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಮನೆ ಮಂದಿ ಪಕ್ಕದಲ್ಲೇ ಇರುವ ಚಾಂದ್ ಸಾಹೇಬ್ ಅವರ ತಂದೆಯ ಮನೆಯಲ್ಲಿ ನಡೆಯುತ್ತಿದ್ದ ಪುಣ್ಯತಿಥಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಕಳ್ಳರು ನುಗ್ಗಿದ್ದಾರೆ. ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು ಮನೆಯೊಳಗೆ ಜಾಲಾಡಿದ್ದು, ಕಪಾಟಿನಲ್ಲಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2 ಮೊಬೈಲ್ ಪೋನ್‌ಗಳು, ವ್ಯಾನಿಟಿ ಬ್ಯಾಗ್‌ಗಳನ್ನು ಕಳವುಗೈದಿದ್ದಾರೆ.
ಮಧ್ಯ ರಾತ್ರಿ ಎರಡೂವರೆ ಗಂಟೆ ವೇಳೆಗೆ ವಾಪಸು ಮನೆ ಮಂದಿ ಬಂದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್., ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ, ಪೂಂಜಾಲಕಟ್ಟೆ ಠಾಣಾ ಪ್ರಭಾರ ಎಸ್ಸೈ ಗಿರಿಯಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನ ದಳವನ್ನು ಕರೆಸಲಾಗಿದೆ. ಸ್ಥಳೀಯರೇ ಈ ಕಳವು ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.







