2009ರಿಂದ 687 ಭಾರತೀಯ ಕ್ರೀಡಾಪಟುಗಳಿಗೆ ನಿಷೇಧ
ಡೋಪಿಂಗ್ ಕಳಂಕದಲ್ಲಿ ಭಾರತಕ್ಕೆ ಕಂಚು!
ಹೊಸದಿಲ್ಲಿ, ಜು.29: ರಿಯೊ ಒಲಿಂಪಿಕ್ಸ್ ಆರಂಭದ ಮುನ್ನವೇ ಭಾರತಕ್ಕೆ ಕಂಚಿನ ಪದಕ ಸಿಕ್ಕಿದೆ. ಆದರೆ ಇದು ಸಂಭ್ರಮಿಸುವ ವಿಚಾರವಲ್ಲ. ಉದ್ದೀಪನ ಔಷಧಿ ಸೇವಿಸಿ ಸಿಕ್ಕಿಬಿದ್ದ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನ ಗಳಿಸಿದ ಕುಖ್ಯಾತಿಗೆ ಪಾತ್ರವಾಗಿದೆ.
ಭಾರತದ ಇಬ್ಬರು ಖ್ಯಾತ ಅಥ್ಲೀಟ್‌ಗಳಾದ ನರಸಿಂಗ್ ಯಾದವ್ ಮತ್ತು ಇಂದ್ರಜೀತ್ ಸಿಂಗ್ ಅವರು ಡೋಪಿಂಗ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಭಾರತದ ರಿಯೊ ಅಭಿಯಾನಕ್ಕೆ ಆರಂಭದಲ್ಲೇ ಹೊಡೆತ ಬಿದ್ದಿದೆ. ಆದರೆ ಭಾರತಕ್ಕೆ ಇದು ಹೊಸದಲ್ಲ. 2009ರಿಂದೀಚೆಗೆ ಭಾರತದ 687 ಅಥ್ಲೀಟ್‌ಗಳು ಇಂಥ ಉದ್ದೀಪನ ಔಷಧಿ ಸೇವಿಸಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನುವುದು ರಾಷ್ಟ್ರೀಯ ಉದ್ದೀಪನ ಔಷಧ ವಿರೋಧಿ ಏಜೆನ್ಸಿ (ನಾಡಾ) ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಅಂದರೆ ಪ್ರತಿ ವರ್ಷ ಸರಾಸರಿ 100 ಮಂದಿ ಕ್ರೀಡಾಪಟುಗಳು ಭಾರತದಲ್ಲಿ ಈ ಡೋಪಿಂಗ್ ಭೂತದಿಂದ ನಿಷೇಧಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಒಲಿಂಪಿಕ್ಸ್ ನಡೆದ ವರ್ಷ 176 ಮಂದಿ ಕ್ರೀಡಾಳುಗಳು ಇದರಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಆದರೆ ಕಟ್ಟುನಿಟ್ಟಿನ ತಪಾಸಣಾ ಕ್ರಮದಿಂದಾಗಿ ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಇಳಿಮುಖವಾಗುತ್ತಿದೆ. ಈ ವರ್ಷ ಜುಲೈ 28ರವರೆಗೆ ವಿವಿಧ ಕ್ರೀಡೆಗಳ 72 ಮಂದಿ ಅಥ್ಲೀಟ್‌ಗಳು ನಿಷೇಧಕ್ಕೆ ಒಳಗಾಗಿದ್ದಾರೆ. ಈ ಪೈಕಿ 16 ಮಂದಿ ಜನವರಿ ಒಂದರಿಂದೀಚೆಗೆ ಈ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇತರ 56 ಮಂದಿ ಒಲಿಂಪಿಕ್ಸ್ ಸಿದ್ಧತೆಗಾಗಿ ಕಳೆದ ವರ್ಷದಿಂದಲೇ ಇದನ್ನು ಮುಂದುವರಿಸಿಕೊಂಡು ಬಂದವರು. ಹೆಚ್ಚು ಡೋಪಿಂಗ್ ಪತ್ತೆಯಾಗಿರುವುದು ಫೀಲ್ಡ್ ಅಥ್ಲೀಟ್ (266) ಮತ್ತು ವೇಯ್ಟ್ ಲಿಫ್ಟಿಂಗ್ (169)ನಲ್ಲಿ. ಇವರಲ್ಲಿ ಬಹುತೇಕ ಮಂದಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದವರಾಗಿದ್ದು, ಹಿರಿಯರು ಮತ್ತು ಕಿರಿಯ ವಿಭಾಗದವರೂ ಸೇರಿದ್ದಾರೆ.