ಪ್ರತಿಭಟನೆ ಹಾದಿ ತಪ್ಪದಿರಲಿ

ಎರಡು ದಿನಗಳ ಹಿಂದೆಯಷ್ಟೇ ಸಾರಿಗೆ ಬಸ್ ಮುಷ್ಕರದಿಂದ ನಾಡು ತತ್ತರಿಸಿತು. ಲಕ್ಷಾಂತರ ರೂ. ನಷ್ಟವಾಯಿತು ಮಾತ್ರವಲ್ಲ, ಸಾರ್ವಜನಿಕ ಸೊತ್ತುಗಳಿಗೂ ಹಾನಿಯಾಯಿತು. ಇನ್ನೇನು ಅವರ ಮುಷ್ಕರ ಮುಗಿಯಿತು ಎನ್ನುವಾಗಲೇ ಮಹಾದಾಯಿ ತೀರ್ಪು ಕರ್ನಾಟಕವನ್ನು ಅಪ್ಪಳಿಸಿದೆ. ಇದೀಗ ರಾಜ್ಯದ ಜನರು ಅನಿವಾರ್ಯವಾಗಿ ಇನ್ನೊಂದು ಮುಷ್ಕರಕ್ಕೆ ಅಣಿಯಾಗಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮಹಾದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ನ್ಯಾಯಮಂಡಳಿಯು ಮಧ್ಯಾಂತರ ತೀರ್ಪು ನೀಡಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಲು 7.5 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ ಕೊಡಬೇಕೆಂಬ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿದೆ. ಮಹಾದಾಯಿ ನದಿಯ 200 ಅಡಿ ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆಯಾದರೂ, ಗೋವಾ ಕರ್ನಾಟಕದ ಜನರಿಗೆ ನೀರನ್ನು ನೀಡಲು ಹಿಂದೇಟು ಹಾಕಿದೆ ಮತ್ತು ಅದನ್ನು ತನ್ನ ವಿಜಯವೆಂದೂ ಘೋಷಿಸಿ, ಸಣ್ಣತನವನ್ನು ಮೆರೆದಿದೆ. ಇಂದು ಗೋವಾ ಪ್ರವಾಸೋದ್ಯಮದ ಮೂಲಕ ತನ್ನ ಅಭಿವೃದ್ಧಿಯ ಕಡೆಗೆ ದೃಷ್ಟಿಯನ್ನಿಟ್ಟಿದ್ದರೆ, ಉತ್ತರ ಕರ್ನಾಟಕದ ಸ್ಥಿತಿ ಹಾಗಿಲ್ಲ. ಅಲ್ಲಿನ ಜನರು ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇದೀಗ ಪ್ರಶ್ನೆ ನೀರಾವರಿಯದ್ದಲ್ಲ. ಕುಡಿಯುವ ನೀರಿಗೆ ಸಂಬಂಧಿಸಿದ್ದು. ಇಲ್ಲಿ ಮಾನವೀಯತೆ ಪ್ರಧಾನ ಪಾತ್ರ ವಹಿಸಬೇಕು. ಈ ಮಧ್ಯಾಂತರ ತೀರ್ಪಿನಿಂದ ಎಲ್ಲವೂ ಮುಗಿದ ಹಾಗೆ ಅಲ್ಲ. ಆದರೂ, ಅಂತಿಮ ತೀರ್ಪು ಹೊರಬರುವವರೆಗೆ ಇಲ್ಲಿನ ಜನರು ನೀರಿನಿಂದ ವಂಚಿತರಾಗಬೇಕಾಗುತ್ತದೆ. ಜನರು ಅಲ್ಲಿಯವರೆಗೂ ತಮ್ಮ ಉಸಿರನ್ನು ಬಿಗಿಹಿಡಿದು ಕಾಯಬೇಕು ಎಂದು ತೀರ್ಪು ಬಯಸುತ್ತದೆ. ಈ ತೀರ್ಪಿನಲ್ಲಿ ಕರ್ನಾಟಕಕ್ಕೆ ಉದ್ದೇಶ ಪೂರ್ವಕವಾಗಿ ಅನ್ಯಾಯ ಮಾಡಿದಂತಾಗಿದೆ.
ಈ ಕುರಿತಂತೆ ಈ ಹಿಂದೆ ಪ್ರಧಾನಿಯ ಮನವೊಲಿಸಲು ಕರ್ನಾಟಕದ ಮುಖ್ಯಮಂತ್ರಿ ಎರಡೆರಡು ಬಾರಿ ಭೇಟಿ ಮಾಡಲು ಪ್ರಯತ್ನಿಸಿದ್ದರಾದರೂ, ಅವರಿಂದ ನೀರಸ ಪ್ರತಿಕ್ರಿಯೆ ದೊರಕಿತ್ತು. ನಿಜಕ್ಕೂ ಇದು ಕರ್ನಾಟಕದ ರೈತರ ಸೋಲಲ್ಲ. ಬದಲಿಗೆ, ಇಚ್ಛಾಶಕ್ತಿಯಿಲ್ಲದ ಕರ್ನಾಟಕದ ರಾಜಕಾರಣಿಗಳ ಸೋಲು. ಯಡಿಯೂರಪ್ಪ, ಅನಂತಕುಮಾರ್, ಸದಾನಂದಗೌಡ ಮೊದಲಾದ ಹಿರಿಯ ರಾಜಕಾರಣಿಗಳು ದಿಲ್ಲಿಯಲ್ಲಿದ್ದರೂ ಇವರಿಗೆ ತಮ್ಮ ರಾಜ್ಯದ ಪರವಾಗಿ ಪ್ರಧಾನಿಯ ಮೇಲೆ, ಪಕ್ಷದ ಮೇಲೆ ಒತ್ತಡ ಹೇರಲು ಸಾಧ್ಯವಾಗಿರಲಿಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಜೆಪಿಗೆ ಮೊತ್ತ ಮೊದಲಿಗೆ ತನ್ನ ಹೆಬ್ಬಾಗಿಲನ್ನು ತೆರೆದುಕೊಟ್ಟ ರಾಜ್ಯ. ಇಂದಿಗೂ ದಕ್ಷಿಣ ಭಾರತದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನೆಲೆಯೂರಿರುವುದು ಕರ್ನಾಟಕದಲ್ಲೇ. ಆದರೆ ತಮ್ಮ ರಾಜಕೀಯ ದುರುದ್ದೇಶಗಳನ್ನು ಸಾಧಿಸಲು ಕರ್ನಾಟಕವನ್ನು ಪೂರ್ಣವಾಗಿ ಬಳಸಿಕೊಳ್ಳುತ್ತಿರುವ ಸಂಘಪರಿವಾರಕ್ಕೆ ಈ ಭಾಗದ ರೈತರು ಕಣ್ಣಿಗೆ ಬೀಳದೇ ಇರುವುದು ಅದರ ಸಮಯಸಾಧಕತನವನ್ನು ಎತ್ತಿ ತೋರಿಸುತ್ತದೆ.
ಉತ್ತರ ಕರ್ನಾಟಕದ ರೈತರಲ್ಲಿ ಬಹುಸಂಖ್ಯಾತರು ಹಿಂದೂಗಳೇ ಅಲ್ಲವೇ? ಎಲ್ಲೋ ಒಂದು ಕೆಜಿ ಗೋ ಮಾಂಸವನ್ನು ಫ್ರಿಜ್ಜಿನಲ್ಲಿಟ್ಟಿದ್ದಾರೆ ಎಂದು ದಾಂದಲೆ ಎಬ್ಬಿಸುವ ಸಂಘಪರಿವಾರ ಮತ್ತು ಬಿಜೆಪಿಗೆ ನೀರಿಗಾಗಿ ಹಪಹಪಿಸುವ ರೈತರೇಕೆ ಕಣ್ಣಿಗೆ ಬೀಳುತ್ತಿಲ್ಲ? ಇಂದು ಗೋ ರಕ್ಷಣೆಗಾಗಿ ವಿಶೇಷ ತೆರಿಗೆಯನ್ನು ಹಾಕಲು ಹೊಂಚು ಹಾಕುತ್ತಿರುವ ಕೇಂದ್ರ ಸರಕಾರಕ್ಕೆ ಗೋವುಗಳಿಗಿಂತ ಮುಖ್ಯ ಅದನ್ನು ಬಳಸುವ ರೈತರು ಎನ್ನುವುದು ಯಾಕೆ ಅರ್ಥವಾಗುತ್ತಿಲ್ಲ? ಮೋದಿಗೆ ಗೋವಾದಲ್ಲಿರುವುದು ಮೇಲಿರುವಷ್ಟು ಆಸಕ್ತಿ ಉತ್ತರ ಕರ್ನಾಟಕದ ಮೇಲೆ ಯಾಕಿಲ್ಲ ಎಂದರೆ, ಇಲ್ಲಿರುವುದು ರೈತರು. ಆದರೆ ಗೋವಾ ಪ್ರವಾಸೋದ್ಯಮ. ಸದ್ಯಕ್ಕೆ ಅವರ ಅಭಿವೃದ್ಧಿಯ ಪರಿಕಲ್ಪನೆಗೆ ಎಲ್ಲ ರೀತಿಯಲ್ಲೂ ಗೋವಾ ಹೊಂದಾಣಿಕೆಯಾಗುತ್ತದೆ. ಗೋವಾದ ಜನರ ಮೋಜುಮಸ್ತಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಸದ್ಯಕ್ಕೆ ಮೋದಿಯ ಹೊಣೆಗಾರಿಕೆ. ರೈತರೋ ನೀರು ಕೇಳುತ್ತಿರುವುದು ಕುಡಿಯುವುದಕ್ಕೆ. ಅದರಿಂದ ದೇಶದ ಅಭಿವೃದ್ಧಿಗೆ ಯಾವ ಲಾಭವೂ ಇಲ್ಲ ಎಂದು ಮೋದಿ ಆಡಳಿತ ನಂಬಿದೆ. ಆದುದರಿಂದಲೇ ಮಹಾದಾಯಿ ನೀರು ಹಂಚಿಕೆಯಲ್ಲಿ ಪದೇಪದೇ ಕರ್ನಾಟಕಕ್ಕೆ ಮುಖಭಂಗವಾಗುತ್ತಿದೆ. ಮಹಾದಾಯಿ ನೀರಿಗೆ ಸಂಬಂಧಪಟ್ಟು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಹೊಂದಾಣಿಕೆಯ ಕೊರತೆಯಿದೆ. ಕೇಂದ್ರದಲ್ಲಿ ಭಾರೀ ಗದ್ದಲವನ್ನು ಎಬ್ಬಿಸಲು ಬಿಜೆಪಿಗೆ ಮುಜುಗರವಿದೆ. ಅಲ್ಲಿರುವುದು ಮೋದಿಯ ಸರ್ವಾಧಿಕಾರ. ಅದನ್ನು ಪ್ರಶ್ನಿಸುವ ಧೈರ್ಯವೂ ಬಿಜೆಪಿಯ ರಾಜ್ಯದ ಸಂಸದರಲ್ಲಿ ಇಲ್ಲ. ಕರ್ನಾಟಕದಲ್ಲಿರುವುದು ಕಾಂಗ್ರೆಸ್ ಸರಕಾರ. ಒಂದು ವೇಳೆ ಮಹಾದಾಯಿ ನೀರಿಗೆ ಸಂಬಂಧಪಟ್ಟು ಜನರಿಗೆ ನೀರು ದೊರಕಿದ್ದೇ ಆದರೆ ಅದರ ಹೆಗ್ಗಳಿಕೆಯ ರಾಜ್ಯದ ಕಾಂಗ್ರೆಸ್ ಸರಕಾರ ತನ್ನದಾಗಿಸಬಹುದು ಎನ್ನುವ ಭಯ ಬಿಜೆಪಿಗಿದೆ. ಈ ಕಾರಣದಿಂದಲೇ ಬಿಜೆಪಿ ಈ ಕುರಿತು ವಿಶೇಷ ಆಸಕ್ತಿಯನ್ನು ತೋರಿಸುತ್ತಿಲ್ಲ. ವಿಪರ್ಯಾಸವೆಂದರೆ ಒಂದೆಡೆ ಜನ ನೀರಿಗಾಗಿ ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೆ ಅತ್ತ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಅವರ ಸಂಗಡಿಗರು ಥಿಯೇಟರ್ ಒಂದರಲ್ಲಿ ವಿಶೇಷ ಸಿನೆಮಾ ಪ್ರದರ್ಶನವೊಂದನ್ನು ವೀಕ್ಷಿಸುತ್ತಿದ್ದರು. ಸಮಸ್ಯೆಯನ್ನು ಅವರು ಎಷ್ಟು ಗಂಭೀರವಾಗಿ ಸ್ವೀಕರಿಸಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.
ಶನಿವಾರ ಕನ್ನಡ ಪರ ಸಂಘಟನೆಗಳು ರಾಜ್ಯ ಬಂದ್ ಘೋಷಿಸಿವೆೆ. ಜನರಿಗೆ ಭಾರೀ ಸಮಸ್ಯೆಯಾಗುತ್ತದೆಯಾದರೂ ಕೇಂದ್ರದ ಗಮನ ಸೆಳೆಯಲು ಬಂದ್ ಅಂತೂ ಅನಿವಾರ್ಯವಾಗಿದೆ. ಸಣ್ಣಪುಟ್ಟ ಕಾರಣಗಳಿಗೆ ಈ ರಾಜ್ಯದಲ್ಲಿ ಬಂದ್‌ಗಳು ನಡೆಯುತ್ತವೆ. ಹೀಗಿರುವಾಗ ಉತ್ತರ ಕರ್ನಾಟಕದ ರೈತರ ಜೀವನ ಮರಣದ ಪ್ರಶ್ನೆಯಾಗಿರುವ ನೀರಿಗಾಗಿ ರಾಜ್ಯ ಬಂದ್ ಮಾಡಿದರೆ ಅದನ್ನು ಆಕ್ಷೇಪಿಸುವಂತಿಲ್ಲ. ಆದರೆ ಬಂದ್‌ನ ಹೆಸರಿನಲ್ಲಿ ಕೆಲವು ದುಷ್ಕರ್ಮಿಗಳು ತಮ್ಮ ದುರುದ್ದೇಶಗಳನ್ನು ಸಾಧಿಸಿಕೊಳ್ಳಲು ಯತ್ನಿಸುತ್ತಾರೆ. ಈ ಕುರಿತು ಎಚ್ಚರಿಕೆ ಬಂದ್‌ಗೆ ಕರೆಕೊಡುವ ಸಂಘಟಕರಿಗೆ ಇರಬೇಕಾಗಿದೆ.
ಕಳೆದೆರಡು ದಿನಗಳಲ್ಲಿ ಪ್ರತಿಭಟನೆಯ ಹೆಸರಲ್ಲಿ ನಡೆದ ಹಿಂಸಾಚಾರದಲ್ಲಿ ಸಾರ್ವಜನಿಕ ಸೊತ್ತುಗಳಿಗೆ ಭಾರೀ ಹಾನಿಯಾಗಿವೆ. ಕೆಲವರು ತಹಶೀಲ್ದಾರ್ ಕಚೇರಿಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ನೂರಾರು ದಾಖಲೆಗಳು ಸುಟ್ಟುಹೋಗಿವೆ. ಒಂದನ್ನು ನೆನಪಿಡಬೇಕು. ಕೇಂದ್ರ ಸರಕಾರ ಮತ್ತು ಗೋವಾದ ಮೇಲಿನ ಸಿಟ್ಟಿನಿಂದ ನಾವು ನಮ್ಮ ಮನೆಗೆ ಬೆಂಕಿ ಹಚ್ಚಿದರೆ ಅದರಿಂದ ನಮಗೇ ನಷ್ಟ. ನಮ್ಮ ಮನೆಗೆ ಅನ್ಯಾಯವಾಗಿದೆ ಎಂದು ನಾವು ನಮ್ಮ ಮನೆಗೇ ಹಾನಿ ಮಾಡಿದರೆ ಅದರಿಂದ ಇನ್ನಷ್ಟು ನಷ್ಟವಲ್ಲದೇ ಲಾಭವಿದೆಯೆ? ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ, ಅಲ್ಲಿರುವ ದಾಖಲೆಗಳು ನಾಶವಾದರೆ ಮುಂದೆ ಕಂಗಾಲಾಗಬೇಕಾಗಿರುವುದು ಇದೇ ರೈತರಾಗಿದ್ದಾರೆ. ಮುಖ್ಯವಾಗಿ ಪ್ರತಿಭಟನೆಯ ಹೆಸರಲ್ಲಿ ಇಂತಹ ದಾಂದಲೆಗಳನ್ನು ನಡೆಸುತ್ತಿರುವವರು ರೈತರಲ್ಲ, ಸಮಯ ಸಾಧಕರು. ಇವರ ಬಗ್ಗೆ ಸಾರ್ವಜನಿಕರು ಮತ್ತು ಕಾನೂನು ವ್ಯವಸ್ಥೆ ಜಾಗೃತಾವಸ್ಥೆಯಲ್ಲಿರಬೇಕು. ಪ್ರತಿಭಟನೆ ಶಾಂತ ರೀತಿಯಲ್ಲಿರಬೇಕು, ಸ್ವಯಂಪ್ರೇರಿತವಾಗಿರಬೇಕು ಮತ್ತು ಎಲ್ಲರಿಗೂ ಮಾದರಿಯಾಗಿರಬೇಕು. ಪ್ರತಿಭಟನೆಯ ಉದ್ದೇಶ ನಮಗೆ ಅನ್ಯಾಯವಾಗಿರುವುದನ್ನು ಕೇಂದ್ರ ಸರಕಾರದ ಗಮನಕ್ಕೆ ತರುವುದಾಗಿದೆ. ಆದರೆ ಆ ಪ್ರತಿಭಟನೆಯಿಂದ ಮತ್ತೆ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುವಂತಾಗಬಾರದು.







