ಜು. 30ರಂದು ಮಕ್ಕಳ ಸುರಕ್ಷೆ, ರಕ್ಷಣೆ ಕುರಿತ ಮಾಹಿತಿ ಕಾರ್ಯಕ್ರಮ
ಮಂಗಳೂರು, ಜು. 29: ಚೈಲ್ಡ್‌ಲೈನ್ ಮಂಗಳೂರು-1098 ಮತ್ತು ನಗರದ ಸಂತ ಆ್ಯಗ್ನೆಸ್ ಕಾಲೇಜು ‘ಸಮುದಾಯದೆಡೆಗೆ ಆಗ್ನೇಸ್’ ಇದರ ಸಹಯೋಗದೊಂದಿಗೆ ಜುಲೈ 30ರಂದು ಪೂರ್ವಾಹ್ನ 11:30ರಿಂದ ಅಪರಾಹ್ನ 12:30ರ ವರೆಗೆ ಮಕ್ಕಳ ಸುರಕ್ಷತೆ, ರಕ್ಷಣೆ ಮತ್ತು ಚೈಲ್ಡ್‌ಲೈನ್-1098 ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಕ್ಕಳ ಸುರಕ್ಷೆ ಮತ್ತು ಮಕ್ಕಳ ರಕ್ಷಣೆ ಕುರಿತ ಮಾಹಿತಿ ಕಾರ್ಯಕ್ರಮವು ಮಂಗಳೂರು ನಗರದ 6 ಶಾಲೆಗಳಲ್ಲಿ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಮಕ್ಕಳ ಮೇಲಿನ ದೈಹಿಕ-ಮಾನಸಿಕ ದೌರ್ಜನ್ಯ, ಮಕ್ಕಳ ಮಾರಾಟ, ಸಾಗಾಟ, ಬಾಲಕಾರ್ಮಿಕತೆ, ಜೀತ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಜಾಗೃತಿ ಮೂಡಿಸಿ, ಇಂತಹ ದೌಜನ್ಯಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿ ಹೋರಾಡಲು ಮಕ್ಕಳ ಸುರಕ್ಷತೆ/ರಕ್ಷಣೆ ಮತ್ತು ಚೈಲ್ಡ್‌ಲೈನ್-1098 ಕುರಿತು 5ನೆ, 6ನೆ ಮತ್ತು 7ನೆ ತರಗತಿ ಮಕ್ಕಳಿಗೆ ನೇರವಾಗಿ ಸಂತ ಆಗ್ನೆಸ್ ಕಾಲೇಜಿನ ಅಂತಿಮ ಪದವಿಯ ಸುಮಾರು 150 ವಿದ್ಯಾರ್ಥಿಗಳು ಮಕ್ಕಳೊಂದಿಗೆ ನೃತ್ಯ, ಮೂಕಾಭಿನಯ, ಹಾಗೂ ಸಂವಾದದ ಮೂಲಕ ಮಾಹಿತಿಯನ್ನು ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ 1000 ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತೆ/ರಕ್ಷಣೆ ಮತ್ತು ಚೈಲ್ಡ್‌ಲೈನ್-1098 ಕುರಿತು ಮಾಹಿತಿಯನ್ನು ನೀಡಲಾಗುವುದು. ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಂಕನಾಡಿ, ಹಿಂದುಳಿದ ವರ್ಗಗಳ ಆಶ್ರಮ ಶಾಲೆ ಕದ್ರಿ ನಂತೂರು, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಮಲ್ಲಿಕಟ್ಟಾ, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಬಿಕರ್ನಕಟ್ಟೆ ಶಾಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.





