ಪ್ರಥಮ ಟೆಸ್ಟ್: ಆಸ್ಟ್ರೇಲಿಯ ಗೆಲುವಿಗೆ 268 ರನ್ ಗುರಿ

ಪಲ್ಲೆಕಲ್, ಜು.29: ಅತ್ಯಂತ ಕುತೂಹಲಕಾರಿ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 268 ರನ್ ಗುರಿ ಪಡೆದಿರುವ ಆಸ್ಟ್ರೇಲಿಯ ಆರಂಭದಲ್ಲೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಕಂಡಿದೆ.
ಶುಕ್ರವಾರ ಇಲ್ಲಿ ನಡೆದ ಮೊದಲ ಟೆಸ್ಟ್‌ನ ನಾಲ್ಕನೆ ದಿನದಾಟವನ್ನು ಅಂಪೈರ್‌ಗಳು ಮಂದ ಬೆಳಕಿನಿಂದಾಗಿ ಬೇಗನೆ ಕೊನೆಗೊಳಿಸಿದಾಗ ಆಸ್ಟ್ರೇಲಿಯ 3 ವಿಕೆಟ್‌ಗಳ ನಷ್ಟಕ್ಕೆ 83 ರನ್ ಗಳಿಸಿತ್ತು. ಅಂತಿಮ ದಿನವಾದ ಶನಿವಾರ ಮೊದಲ ಟೆಸ್ಟ್‌ನ್ನು ಜಯಿಸಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಸಾಧಿಸಲು ಆಸ್ಟ್ರೇಲಿಯ ತಂಡ ಉಳಿದ ಏಳು ವಿಕೆಟ್‌ಗಳ ಸಹಾಯದಿಂದ ಇನ್ನೂ 185 ರನ್ ಗಳಿಸಬೇಕಾಗಿದೆ. ನಾಯಕ ಸ್ಟೀವನ್ ಸ್ಮಿತ್ ಔಟಾಗದೆ 26 ರನ್ ಗಳಿಸಿದ್ದಾರೆ.
ಹಿರಿಯ ಸ್ಪಿನ್ನರ್ ರಂಗನ ಹೆರಾತ್ ಆಸೀಸ್‌ನ ಆರಂಭಿಕ ಆಟಗಾರ ಡೇವಿಡ್ ವಾರ್ನರ್(1) ವಿಕೆಟ್‌ನ್ನು ಉಡಾಯಿಸಿದರು. ಆಫ್ ಸ್ಪಿನ್ನರ್ ದಿಲ್‌ರುವಾನ್ ಪೆರೇರ ಆಸೀಸ್‌ನ ಇನ್ನೋರ್ವ ಅಗ್ರ ಸರದಿಯ ಆಟಗಾರ ಉಸ್ಮಾನ್ ಖ್ವಾಜಾರನ್ನು(18) ಎಲ್ಬಿಡಬ್ಲು ಬಲೆಗೆ ಬೀಳಿಸಿದರು. ಆಗ ಆಸ್ಟ್ರೇಲಿಯದ ಸ್ಕೋರ್ 33ಕ್ಕೆ 2.
ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದು ಚೊಚ್ಚಲ ಪಂದ್ಯದಲ್ಲೇ ಮಿಂಚಿರುವ ಸ್ಪಿನ್ನರ್ ಲಕ್ಷಣ್ ಸಂಡಕನ್ 29 ರನ್ ಗಳಿಸಿದ್ದ ಇನ್ನೋರ್ವ ಆರಂಭಿಕ ಆಟಗಾರ ಜೋ ಬರ್ನ್ಸ್ ವಿಕೆಟ್‌ನ್ನು ಉಡಾಯಿಸಿದರು.
54 ಎಸೆತಗಳಲ್ಲಿ ಒಂದೂ ಬೌಂಡರಿ ಬಾರಿಸದೇ 26 ರನ್ ಗಳಿಸಿರುವ ಸ್ಮಿತ್ ಅವರು ಆಡಮ್ ವೋಗ್ಸ್‌ರೊಂದಿಗೆ(9) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಶ್ರೀಲಂಕಾ 353 ರನ್: ಇದಕ್ಕೆ ಮೊದಲು ಆರು ವಿಕೆಟ್‌ಗಳ ನಷ್ಟಕ್ಕೆ 282 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡ ಕುಶಾಲ್ ಮೆಂಡಿಸ್ ಬಾರಿಸಿದ ಚೊಚ್ಚಲ ಶತಕದ(176 ರನ್, 254 ಎಸೆತ, 21 ಬೌಂಡರಿ, 1 ಸಿಕ್ಸರ್) ಸಹಾಯದಿಂದ 353 ರನ್‌ಗೆ ಆಲೌಟಾಯಿತು. ಆಸ್ಟ್ರೇಲಿಯಕ್ಕೆ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ 268 ರನ್ ಗುರಿ ನೀಡಿತು.
ಆಸೀಸ್ ಕಳೆದ 10 ವರ್ಷಗಳ ನಂತರ 250ಕ್ಕೂ ಅಧಿಕ ರನ್ ಸವಾಲು ಪಡೆದ ತಂಡವಾಗಿದೆ.
ಪ್ರಸ್ತುತ ವಿಶ್ವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಸ್ಮಿತ್ ಬಳಗ ಕಳೆದ ಕೆಲವು ವರ್ಷಗಳಿಂದ ಉಪ ಖಂಡದಲ್ಲಿ ಕಳಪೆ ದಾಖಲೆ ಕಾಯ್ದುಕೊಂಡಿದೆ. 2013ರಲ್ಲಿ ಭಾರತ ವಿರುದ್ಧ 0-4 ಅಂತರದಿಂದ ಸೋತಿದ್ದ ಆಸ್ಟ್ರೇಲಿಯ ಯುಎಇಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ವೈಟ್‌ವಾಶ್ ಅನುಭವಿಸಿತ್ತು.
ಮೊದಲ ಇನಿಂಗ್ಸ್‌ನಲ್ಲಿ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದಿರುವ ಹೆರಾತ್ ಹಾಗೂ ಲಕ್ಷಣ್ ಅಂತಿಮ ದಿನದಾಟದಲ್ಲಿ ಸ್ಪಿನ್‌ಸ್ನೇಹಿ ಪಿಚ್‌ನಲ್ಲಿ ಆಸೀಸ್‌ಗೆ ಕಠಿಣ ಸವಾಲಾಗುವ ಸಾಧ್ಯತೆಯಿದೆ. ಸಂಕ್ಷಿಪ್ತ ಸ್ಕೋರ್
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್:
34.2 ಓವರ್‌ಗಳಲ್ಲಿ 117 ರನ್‌ಗೆ ಆಲೌಟ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್:
79.2 ಓವರ್‌ಗಳಲ್ಲಿ 203 ರನ್‌ಗೆ ಆಲೌಟ್
ಶ್ರೀಲಂಕಾ ಎರಡನೆ ಇನಿಂಗ್ಸ್:
93.4 ಓವರ್‌ಗಳಲ್ಲಿ 353 ರನ್‌ಗೆ ಆಲೌಟ್
(ಕುಶಾಲ್ ಮೆಂಡಿಸ್ 176, ದಿನೇಶ್ ಚಾಂಡಿಮಲ್ 42, ಧನಂಜಯ್ ಡಿ ಸಿಲ್ವಾ 36, ಸ್ಟಾರ್ಕ್ 4-84)
ಆಸ್ಟ್ರೇಲಿಯ ಎರಡನೆ ಇನಿಂಗ್ಸ್:
27 ಓವರ್‌ಗಳಲ್ಲಿ 83/3
(ಸ್ಟೀವನ್ ಸ್ಮಿತ್ ಔಟಾಗದೆ 26, ರಂಗನ ಹೆರಾತ್ 1-35, ಲಕ್ಷಣ್ 1-13)







