ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಜಿಮಾಸ್ಟಿಕ್ ಸ್ಪರ್ಧಿ ದೀಪಾ

ಅಗರ್ತಲ, ಜು.29: ತ್ರಿಪುರಾದ ದೀಪಾ ಕರ್ಮಾಕರ್ ಬ್ರೆಝಿಲ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಜಿಮ್ನಾಸ್ಟ್ ಪಟು. ಒಲಿಂಪಿಕ್ಸ್ ಆತಿಥ್ಯವಹಿಸಿರುವ ರಿಯೋ ನಗರದಲ್ಲಿ ಎಪ್ರಿಲ್‌ನಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ದೀಪಾ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ಪಟು ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ಬರೆದಿದ್ದರು.
ದೀಪಾ ಕ್ವಾಲಿಫೈಯರ್ ಸುತ್ತಿನಲ್ಲಿ ಚಿನ್ನದ ಪದಕವನ್ನು ಜಯಿಸಿ ವಿಶ್ವದ ಗಮನ ಸೆಳದರು. ದೀಪಾರ ಈ ಸಾಧನೆಯ ಹಿಂದೆ ಖ್ಯಾತ ಕ್ರೀಡಾಳುಗಳು, ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಹಾಗೂ ದೀರ್ಘಕಾಲೀನ ಕೋಚ್ ಬಿಸ್ವೇಶರ್ ನಂದಿ ಅವರ ಪ್ರೋತ್ಸಾಹ ಅಪಾರವಿದೆ.
‘‘ರಿಯೋಗೆ ಅರ್ಹತೆ ಪಡೆದಿದ್ದಕ್ಕೆ ತುಂಬಾ ಸಂತೋಷವಾಯಿತು. ಈಗ ನನ್ನ ಮೇಲೆ ತುಂಬಾ ಜವಾಬ್ದಾರಿಯಿದೆ. ರಿಯೋದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕಾರಣ ಅಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿರುವೆ. ಒಲಿಂಪಿಕ್ಸ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರು ತಿಂಗಳಿಂದ ಅಭ್ಯಾಸ ನಡೆಸುತ್ತಿರುವೆ. ಫೈನಲ್ ತಲುಪುವುದು ನನ್ನ ಮುಂದಿರುವ ಮೊದಲ ಗುರಿ’’ ಎಂದು ದೀಪಾ ಹೇಳಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಮರ್ಥವಾಗಿದ್ದರೆ ಅಭ್ಯಾಸ ನಡೆಸಲು ಇನ್ನಷ್ಟು ಸಮಯಾವಕಾಶ ಸಿಗುತ್ತಿತ್ತು. ನನಗೆ ಎರಡನೆ ಬಾರಿ ಅವಕಾಶ ನೀಡಿರುವ ದೇಶದ ಜಿಮ್ನಾಸ್ಟಿಕ್ ಫೆಡರೇಶನ್‌ಗೆ ಋಣಿಯಾಗಿರುವೆ. ಅವಕಾಶ ಲಭಿಸಿದಾಗ ಅದನ್ನು ತಪ್ಪಿಸಿಕೊಳ್ಳಬಾರದೆಂದು ನಿರ್ಧರಿಸಿದ್ದೆ ಎಂದು ದೀಪಾ ಹೇಳಿದರು.
14ರ ಹರೆಯದಲ್ಲಿ ಜೂನಿಯರ್ ನ್ಯಾಶನಲ್ಸ್ ಜಯಿಸಿದ್ದ ದೀಪಾ ಆ ಬಳಿಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ 77 ಪದಕ ಜಯಿಸಿದ್ದರು. ಇದರಲ್ಲಿ 67 ಚಿನ್ನದ ಪದಕಗಳಿವೆ.
‘‘ಜಿಮ್ನಾಸ್ಟಿಕ್ ಒಂದು ಅಸಾಮಾನ್ಯ ಕ್ರೀಡೆ. ಇದರಲ್ಲಿ ದೇಹವನ್ನು ವಿವಿಧ ರೀತಿಯಲ್ಲಿ ತಿರುಗಿಸಬೇಕಾಗುತ್ತದೆ. ಹಾಗಾಗಿ ಇದರಲ್ಲಿ 99 ಶೇ. ಅಪಾಯವಿದೆ. ನಿರಂತರ ಅಭ್ಯಾಸದಿಂದ ಅಪಾಯವನ್ನು ಆತ್ಮವಿಶ್ವಾಸವಾಗಿ ಪರಿವರ್ತಿಸಬಹುದು. ನನ್ನ ತಂದೆ ಸಾಯ್‌ನಲ್ಲಿ ವೇಟ್‌ಲಿಫ್ಟಿಂಗ್ ಕೋಚ್ ಆಗಿದ್ದರು. ನನ್ನ ಮೊದಲ ಕೋಚ್ ಸೋಮಾ ನಂದಿ. ಕಳೆದ 15 ವರ್ಷಗಳಿಂದ ಬಿಸ್ವೇಶ್ವರ್ ನಂದಿ ನನಗೆ ಕೋಚ್ ನೀಡುತ್ತಿದ್ದಾರೆ. ಅಗರ್ತಲ ಸಣ್ಣ ನಗರ. ಈ ನಗರ ಕೆಲವರಿಗೆ ಗೊತ್ತಿಲ್ಲ. ಈ ನಗರಕ್ಕೆ ಹೆಮ್ಮೆ ತರುವ ವಿಶ್ವಾಸ ನನಗಿತ್ತು. ತ್ರಿಪುರಾದಲ್ಲಿ ಹೆಚ್ಚು ಕ್ರೀಡಾಗಳು ಇಲ್ಲವೇ ಅಥ್ಲೀಟ್‌ಗಳು ಹೊರಹೊಮ್ಮಿಲ್ಲ. ನಾನು ಅದನ್ನು ಬದಲಿಸಲು ಬಯಸಿದ್ದೇನೆ’’ ಎಂದು ದೀಪಾ ತಿಳಿಸಿದರು.
ದೀಪಾ 2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದರು. ನಾಲ್ಕು ವರ್ಷಗಳ ಬಳಿಕ ಗ್ಲಾಸ್ಗೋದಲ್ಲಿ ನಡೆದ ಗೇಮ್ಸ್‌ನಲ್ಲಿ ಮಂಡಿನೋವಿನ ಹೊರತಾಗಿಯೂ ಕಂಚಿನ ಪದಕ ಜಯಿಸಿದರು. ನ್ಯಾಶನಲ್ ಶಿಬಿರ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರಣ 8 ತಿಂಗಳು ಅಭ್ಯಾಸ ನಡೆಸದ ದೀಪಾ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 3ನೆ ಸ್ಥಾನ ಪಡೆದಿದ್ದರು.
ದೀಪಾ ಕರ್ಮಾಕರ್
ಜನ್ಮದಿನ: 1993 ಆಗಸ್ಟ್ 9(ವಯಸ್ಸು 22)
ಜನ್ಮಸ್ಥಳ: ಅಗರ್ತಲ, ತ್ರಿಪುರಾ
ಸ್ಪರ್ಧೆಯ ವಿಭಾಗ: ಮಹಿಳೆಯರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್
ವೃತ್ತಿಪರ ಸಾಧನೆ
2014ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು
2015ರ ಹಿರೋಶಿಮಾ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು
ದೀಪಾ ಕರ್ಮಾಕರ್ ಇವೆಂಟ್
ಜಿಮ್ನಾಸ್ಟಿಕ್ಸ್(ಆರ್ಟಿಸ್ಟಿಕ್)
ಒಲಿಂಪಿಕ್ಸ್: ಮೊದಲ ಬಾರಿ ಪ್ರವೇಶ
ಸ್ಪರ್ಧಾ ಸಮಯ: ಆಗಸ್ಟ್ 7, ಸಮಯ: ಸಂಜೆ 6:15(ಭಾರತೀಯ ಕಾಲಮಾನ)
ಸ್ಥಳ: ರಿಯೋ ಒಲಿಂಪಿಕ್ಸ್ ಅರೆನಾ







