ಹಾಸನ ಪೊಲೀಸರಿಂದ 8 ಮಂದಿ ದರೋಡೆಕೋರರ ಬಂಧನ
.jpg)
ಹಾಸನ, ಜು.30: 8 ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚನ್ನರಾಯಪಟ್ಟಣ ವೃತ್ತ ಠಾಣಾ ವ್ಯಾಪ್ತಿಗೆ ಸೇರಿದ ನುಗ್ಗೇಹಳ್ಳಿ ಪೊಲೀಸ್ ಠಾಣೆ ಬಸವನಪುರ ಗ್ರಾಮದಲ್ಲಿರುವ ಸತೀಶ್ ಎಂಬುವರ ತೋಟದ ಮನೆಗೆ ನುಗ್ಗಿ ದರೋಡೆಗೈದ ಆರೋಪಿಗಳನ್ನು ಬಂಧಿಸಲಾಗಿದೆ.ಬೆಂಗಳೂರಿನ ಮುನೇಶ್ವರ ನಗರದ ಪ್ರವೀಣ್ (27), ಬೆಂಗಳೂರಿನ ವಿನಾಯಕ ನಗರ ಕೂಡ್ಲುನ ವಿನಯ್ (23), ಅರಸೀಕೆರೆ ತಾಲೂಕಿನ ಮೊಸಳೆ ಗ್ರಾಮದ ಅನೀಲ್ (23), ಬೆಂಗಳೂರಿನ ಬೊಮ್ಮನಹಳ್ಳಿಯ ಅರುಣ್ ಕುಮಾರ್( 23), ಬೆಂಗಳೂರಿನ ಕೃಷ್ಣಾರೆಡ್ಡಿ ಅಪಾರ್‌ಮೆಂಟ್, ಬೇಗೂರು ರಸ್ತೆಯಲ್ಲಿರುವ ಸಾಯಿಕುಮಾರ್ (20), ತುಮಕೂರು ಉಪ್ಪಾರಹಳ್ಳಿಯ ಚಂದ್ರಶೇಖರ್ (23), ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಕಾಂತಮ್ಮ (45), ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ದಾಕ್ಷಾಯಿಣಿ (30) ಬಂಧಿತರು ಎಂದರು. ಉಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಹೇಳಿದರು.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವೀ ಕಾರ್ಯಾಚರಣೆ ನಡೆಸಿದ ಹೊಳೆನರಸೀಪುರ ಉಪವಿಭಾಗದ ಕಿಶೋರ್ ಹಾಗೂ ಚನ್ನರಾಯಪಟ್ಟಣ ಸಿಪಿಐ ಸಿ.ಜೆ.ರಂಗಸ್ವಾಮಿ ಮತ್ತು ನಗರ ಠಾಣೆ ಪಿಎಸೈ ವಿನೋದ್ ರಾಜ್, ನುಗ್ಗೆಹಳ್ಳಿ ಠಾಣಾ ಪಿಎಸೈ ರಾಘವೇಂದ್ರ ಹಾಗೂ ಸಿಬ್ಬಂದಿಯಾದ ಸುರೇಶ್, ಯೋಗಾಂಭರಂ, ರವಿಕುಮಾರ್, ವೀರಭದ್ರೇಗೌಡ, ನಾಗರಾಜ್, ಕೃಷ್ಣೇಗೌಡ, ಚಾಲಕ ಧರ್ಮೇಂದ್ರ ಕುಮಾರ್‌ರನ್ನು ಶ್ಲಾಘಿಸಿದರು.





