ಗದ್ದಲದ ನಡುವೆಯೂ ಮುಂದುವರಿದ ಕಿನ್ಯಾ ಗ್ರಾಮಸಭೆ

ಕೊಣಾಜೆ, ಜು.30: ಗ್ರಾಮಸ್ಥರ ಗದ್ದಲ, ಕೋಲಾಹಲದ ನಡುವೆ ಕಿನ್ಯಾ ಗ್ರಾಮ ಪಂಚಾಯತ್‌ನ 2016-17ನೆ ಸಾಲಿನ ಗ್ರಾಮಸಭೆಯು ಶನಿವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿಯೇ ಗ್ರಾಮಸ್ಥರು ಸಭೆಯಲ್ಲಿ ಕೆಲವೇ ಕೆಲವು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದು, ಪೊಲೀಸ್, ಆಹಾರ ಇಲಾಖೆಯ ಅಧಿಕಾರಿಗಳು ಆಗಮಿಸದೇ ಇದ್ದುದರಿಂದ ಆಕ್ರೋಶಗೊಂಡು ಗದ್ದಲವೆಬ್ಬಿಸಿದರು. ಬಳಿಕ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ನಾರಾಯಣ ಹಾಗೂ ಉಪಾಧ್ಯಕ್ಷ ಸಿರಾಜ್ ಕಿನ್ಯಾ ಅವರು ಸಭಿಕರನ್ನು ಸಮಾಧಾನ ಪಡಿಸಲು ಯತ್ನಿಸಿ ಸಭೆ ಮುಂದುವರಿಯಲು ಅನುವು ಮಾಡಿಕೊಡುವಂತೆ ಕೋರಿದರು.
ಬಳಿಕ ಭಾಗವಹಿಸಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಸೌಲ್ಯಗಳ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಎನ್‌ಆರ್‌ಇಜಿಯ ಅವ್ಯವಹಾರ, ಅಧಿಕಾರಿಗಳ ಏಕಪಕ್ಷೀಯ ನಿರ್ಧಾರಗಳು, ರೇಷನ್ ಬೇಕಾದವರು ಪಂಚಾಯತ್‌ಗೆ ತೆರಳಿ ಟೋಕನ್ ಪಡೆಯಬೇಕಾದ ಅನಿವಾರ್ಯತೆ ಮುಂತಾದ ಅವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಗದ್ದಲವೆಬ್ಬಿಸಿದರು. ಅಲ್ಲದೆ ಕಿನ್ಯಾ ಬಾಗದಿಂದ ಸಂಚರಿಸುವ ಬಸ್ಸುಗಳು ಕೆಲವೊಮ್ಮೆ ಮದುವೆ ಇನ್ನಿತರ ಸಮಾರಂಭಗಳ ಖಾಸಗಿ ಟ್ರಿಪ್‌ಗಳಲ್ಲೇ ಬ್ಯುಸಿಯಾಗಿದ್ದು ಈ ಭಾಗದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಈ ಬಗ್ಗೆ ಪಂಚಾಯತ್ ಗಮನಹರಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಶಿಕ್ಷಕರ ವರ್ಗಾವಣೆಯಿಂದ ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯದ ಬಗ್ಗೆ ವಿದ್ಯಾರ್ಥಿ ಪೋಷಕರು ಸಭೆಯಲ್ಲಿ ಅಳಲನ್ನು ತೋಡಿಕೊಂಡರು.
ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಅಕ್ಷರದಾಸೋಹದ ಯಶೋಧರ್ ಸಭೆಯನ್ನು ನಡೆಸಿಕೊಟ್ಟರು.







