ದೇಶದಲ್ಲಿ ಮುಸ್ಲಿಮ್ ಸಮುದಾಯ ಹೆಚ್ಚು ಅನ್ಯಾಯಕ್ಕೊಳಗಾಗುತ್ತಿದೆ: ಕೆ.ಅಶ್ರಫ್
ಭಟ್ಕಳ: ತಂಝೀಮ್‌ನಿಂದ ಬೃಹತ್ ಮುಸ್ಲಿಮ್ ಐಕ್ಯತಾ ಸಮಾವೇಶ

ಭಟ್ಕಳ, ಜು.30: ಮುಸ್ಲಿಂ ಸಮುದಾಯ ದೇಶದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾದ ಸಮುದಾಯವಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ದ.ಕ. ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಹೇಳಿದ್ದಾರೆ.
ಅವರು ಶನಿವಾರ ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆ ಆಯೋಜಿಸಿದ್ದ ಕರಾವಳಿ ಜಿಲ್ಲೆಗಳ ಮುಸ್ಲಿಮ್ ಸಮುದಾಯದ ಈದ್ ಮಿಲನ್ ಹಾಗೂ ಏಕತಾ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕರಾವಳಿ ಜಿಲ್ಲೆಗಳ ಮುಸ್ಲಿಮರು ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾಗುತ್ತಿದ್ದು ಉತ್ತರಕನ್ನಡ, ಉಡುಪಿ ಹಾಗೂ. ದ.ಕ. ಜಿಲ್ಲೆಯ ಮುಸ್ಲಿಮ್ ಮುಖಂಡರನ್ನುಒಂದೇ ವೇದಿಕೆಯಡಿ ತರುವ ತಂಝೀಮ್‌ನ ಪ್ರಯತ್ನ ನಿಜಕ್ಕೂ ಹೆಚ್ಚು ಪ್ರಶಂಸನೀಯ. ಸಮುದಾಯದ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಬೇಕಾಗಿದೆ ಎಂದರು.
ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ಮುಸ್ಲಿಮ್ ಸಮುದಾಯ ಸೋತು ಹೋಗುವ, ಭರವಸೆ ಕಳೆದುಕೊಳ್ಳುವ, ಹತಾಶರಾಗುವ ಸಮುದಾಯವಲ್ಲ. ನಮ್ಮಲ್ಲಿನ ಭಿನ್ನತೆಗಳನ್ನು ಬದಿಗೊತ್ತಿ ಸಮುದಾಯಕ್ಕಾಗಿ ಶ್ರಮಿಸಬೇಕಾಗಿದೆ. ಪವಿತ್ರ ಕುರ್‌ಆನ್ ಹಾಗೂ ಪ್ರವಾದಿ ಮುಹಮ್ಮದ್ ಪೈಗಂಬರರ ಸಂದೇಶಗಳನ್ನು ಪಾಲಿಸುತ್ತ ನಾವು ಸಮುದಾಯವನ್ನು ಮುನ್ನಡೆಸಬೇಕು. ಬೇರೆ ಬೇರೆ ಸಂಘಟನೆಗಳಲ್ಲಿ ಹಂಚಿ ಹಂಚಿಹೋಗಿರುವುದು ಮುಸ್ಲಿಮರ ದುರಂತವಾಗಿದೆ ಎಂದರು.
ಭಟ್ಕಳ ಜಾಮಿಯಾ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ನದ್ವಿ ಮಾತನಾಡಿ, ಮುಸ್ಲಿಮ್ ಸಮುದಾಯ ಪರಸ್ಪರರನ್ನು ಗೌರವಿಸುತ್ತ ಇತರರನ್ನು ಅರ್ಥ ಮಾಡಿಕೊಳ್ಳುತ್ತ ಒಗ್ಗಟ್ಟಾಗಿ ಬದುಕಬೇಕು ಎಂದು ಕರೆ ನೀಡಿದರು.
ಮಜ್ಲಿಸೆ ಇಸ್ಲಾಹ್ ತಂಝೀಮ್ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮಝಮ್ಮಿಲ್ ಕಾಝಿಯಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಸೈಯದ್ ಖಲಿಲುರ್ರಹ್ಮಾನ್ ಎಸ್.ಎಂ, ಮಂಗಳೂರು ಶಾಸಕ ಬಿ.ಎ. ಮೊಯ್ದೀನ್ ಬಾವ, ಮುಸ್ಲಿಮ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ಅಹ್ಮದ್, ಸುನ್ನಿ ಮುಖಂಡ ಹೈದರ್ ಮಂಗಳೂರು, ಶಾಫಿ ಬೆಳ್ಳಾರೆ ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಹೀಂ ಜುಕಾಕೋ, ಫಾರೂಕ್ ಬಾವಾ, ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮೌಲಾನ ಮಖ್ಬೂಲ್ ಆಹ್ಮದ್ ನದ್ವಿ ಮತ್ತಿತರರು ಉಪಸ್ಥಿತರಿದ್ದರು.
ಮೌಲಾನ ನೇಮತುಲ್ಲಾ ಅಸ್ಕರಿ ಕುರ್‌ಆನ್ ಪಠಿಸಿದರು.. ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸ್ವಾಗತಿಸಿದರು. ಅತಿಖುರ್ರಹ್ಮಾನ್ ಶಾಬಂದ್ರಿ ಕಾರ್ಯಕ್ರಮ ನಿರೂಪಿಸಿದರು.







