ಕೇರಳ ಆನೆಯ ಗಿನ್ನೆಸ್ ದಾಖಲೆ ಸೇರ್ಪಡೆಗೆ ಪ್ರಾಣಿಹಕ್ಕುಗಳ ಸಂಸ್ಥೆಯ ವಿರೋಧ

ತಿರುವನಂತಪುರ, ಜು.30: ತಿರುವಂಕೂರು ದೇವಸ್ವಂ ಮಂಡಳಿಯು 86 ವರ್ಷ ವಯಸ್ಸಿನ ನಿವೃತ್ತ ಆನೆಯೊಂದನ್ನು ಬಂಧನದಲ್ಲಿರುವ ಅತ್ಯಂತ ಹಿರಿಯ ವಯಸ್ಸಿನ ಆನೆಯೆಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಲು ಯತ್ನಿಸುತ್ತಿರುವುದನ್ನು ಪ್ರಮುಖ ಪ್ರಾಣಿ ಹಕ್ಕುಗಳ ಸಂಸ್ಥೆಯಾದ ‘ಹೇರಿಟೆಜ್ ಆನಿಮಲ್ ಟಾಸ್ಕ್ ಫೋರ್ಸ್’ (ಎಚ್‌ಎಟಿಎಫ್) ಟೀಕಿಸಿದೆ.
ದಾಕ್ಷಾಣಿಯಿ ಆನೆಯ ಮಾಲಕತ್ವವನ್ನು ತಾನು ಹೊಂದಿದ್ದೇನೆಂದು ಸಾಬೀತುಪಡಿಸುವ ಯಾವುದೇ ಪ್ರಮಾಣಪತ್ರವನ್ನು ತಿರುವಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೊಂದಿಲ್ಲದಿದ್ದು, ಇದು ಕಾನೂನಿನ ಉಲ್ಲಂಘನೆಯಾಗಿದೆಯೆಂದು ಎಚ್‌ಎಟಿಎಫ್ ಕಾರ್ಯದರ್ಶಿ ವಿ.ಕೆ.ವೆಂಕಟಾಚಲಂ ಅವರು ಕೇಂದ್ರದ ಆನೆ ಯೋಜನೆಯ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಆಪಾದಿಸಿದ್ದಾರೆ.
ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲ ಸೇರಿದಂತೆ ಹಲವಾರು ದೇವಾಲಯಗಳ ಆಡಳಿತವನ್ನು ನಿರ್ವಹಿಸುತ್ತಿರುವ ಟಿಡಿಬಿ ಸೆರೆಯಲ್ಲಿರುವ ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಏಶ್ಯನ್ ಆನೆಯೆಂದು ವಿಶ್ವದಾಖಲೆ ಪುಸ್ತಕಕ್ಕ ಸೇರ್ಪಡೆಗೊಂಡ ದಾಕ್ಷಾಯಿಣಿ ಆನೆಯನ್ನು ಸನ್ಮಾನಿಸಿತ್ತು.
2003ರ ವನ್ಯಮೃಗ ಸಂಗ್ರಹ ಘೋಷಣೆ ಕಾನೂನು ಪ್ರಕಾರ ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಶದಲ್ಲಿರುವ ಯಾವುದೇ ಆನೆಯ ಮಾಲಕತ್ವವನ್ನು ಹೊಂದಿರುವ ಬಗ್ಗೆ ಪ್ರಮಾಣಪತ್ರವನ್ನು 2003ರ ಅಗಸ್ಟ್ 18ರಿಂದ 2003ರ ಅಕ್ಟೋಬರ್ 18ರೊಳಗೆ ಹೊಂದಿರಬೇಕಾಗಿದೆ. ಆದರೆ ಟಿಡಿಬಿಯು ಈ ಅವಧಿಯಲ್ಲಿ ಅಂತಹ ಯಾವುದೇ ಪ್ರಮಾಣಪತ್ರವನ್ನು ಪಡೆದಿಲ್ಲವೆಂದು ವೆಂಕಟಾಚಲಂ ಪತ್ರದಲ್ಲಿ ತಿಳಿಸಿದ್ದಾರೆ.





