ಸೌದಿಯ ನಿರುದ್ಯೋಗಿ ಭಾರತೀಯರಿಗೆ ಪಡಿತರ ಆಹಾರ : ಭಾರತೀಯ ರಾಯಭಾರಿ ಕಚೇರಿಗೆ ಸುಷ್ಮಾ ಸೂಚನೆ

ಹೊಸದಿಲ್ಲಿ,ಜು.30: ಸೌದಿ ಆರೇಬಿಯದಲ್ಲಿ ತೀವ್ರವಾದ ಸಂಕಷ್ಟಗಳನ್ನು ಎದುರಿಸುತ್ತಿರುವ ನಿರುದ್ಯೋಗಿ ಭಾರತೀಯ ಕಾರ್ಮಿಕರಿಗೆ ಉಚಿತ ಪಡಿತರ ಆಹಾರವನ್ನು ಒದಗಿಸುವಂತೆ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಸೂಚಿಸಿದ್ದಾರೆ.
‘‘ ಸೌದಿ ಆರೇಬಿಯ ಹಾಗೂ ಕುವೈತ್‌ನಲ್ಲಿ ಭಾರೀ ಸಂಖ್ಯೆಯ ಭಾರತೀಯರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಅವರ ಮಾಲಕರು ವೇತನವನ್ನು ಪಾವತಿಸದೆ, ತಮ್ಮ ಕಾರ್ಖಾನೆಗಳನ್ನು ಮುಚ್ಚಿದ್ದಾರೆ’’ ಎಂದು ಸ್ವರಾಜ್ ಶನಿವಾರ ಟ್ವೀಟ್ ಮಾಡಿದ್ದಾರೆ. ಈ ಬಿಕ್ಕಟ್ಟನ್ನು ಬಗೆಹರಿಸಲು ತನ್ನ ಸಹದ್ಯೋಗಿಗಳಾದ ವಿ.ಕೆ.ಸಿಂಗ್ ಸೌದಿ ಆರೇಬಿಯಕ್ಕೆ ತೆರಳಲಿದ್ದಾರೆ ಹಾಗೂ ಎಂ.ಜೆ. ಅಕ್ಬರ್ ಈ ಬಗ್ಗೆ ಕುವೈತ್ ಹಾಗೂ ಸೌದಿ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆಂದು ಅವರು ಹೇಳಿದ್ದಾರೆ. ಜಿದ್ದಾದಲ್ಲಿ ಕಳೆದ ಮೂರು ದಿನಗಳಿಂದ ಸುಮಾರು 800 ಮಂದಿ ನಿರುದ್ಯೋಗಿ ಭಾರತೀಯ ಕಾರ್ಮಿಕರು ಆಹಾರವಿಲ್ಲದೆ, ಹಸಿವಿನಿಂದ ನರಳುತ್ತಿದ್ದಾರೆಂದು ಅನಿವಾಸಿ ಭಾರತೀಯರೊಬ್ಬರು ಟ್ವೀಟ್ ಮಾಡಿದ ಬಳಿಕ ಸುಷ್ಮಾ ಈ ಪ್ರತಿಕ್ರಿಯೆ ನೀಡಿದ್ದಾರೆ.
‘‘ಸೌದಿ ಆರೇಬಿಯದಲ್ಲಿ ನಿರುದ್ಯೋಗಿಯಾಗಿರುವ ಯಾವುದೇ ಭಾರತೀಯ ಕಾರ್ಮಿಕನು ಇನ್ನು ಮುಂದೆ ಆಹಾರವಿಲ್ಲದೆ ಬಳಲಾರನೆಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಪ್ರತಿ ಗಂಟೆಗೂ ಈ ವಿಷಯದ ಬಗ್ಗೆ ನಿಗಾವಿರಿಸಿದ್ದೇನೆ. ಕುವೈತ್‌ನಲ್ಲಿನ ಸನ್ನಿವೇಶನ್ನು ನಿಭಾಯಿಸಬಹುದಾದರೂ, ಸೌದಿ ಆರೇಬಿಯದಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ’’ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ. ಸೌದಿ ಆರೇಬಿಯದಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿದ ಅನಿವಾಸಿ ಭಾರತೀಯರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಕಾರ್ಮಿಕರಾಗಿದ್ದ್ಜಾರೆ.





