ಡ್ರಗ್ಸ್ ಜಾಲ: ಮಮತಾ ಕುಲಕರ್ಣಿಯ ಬ್ಯಾಂಕ್ ಖಾತೆಗಳ ಮುಟ್ಟುಗೋಲು

ಥಾಣೆ,ಜು.30: ಬಹುಕೋಟಿ ಎಫೆಡ್ರೈನ್ ಮಾದಕದ್ರವ್ಯ ಮಾರಾಟ ಜಾಲಕ್ಕೆ ಸಂಬಂಧಿಸಿ, ಮಾಜಿ ಬಾಲಿವುಡ್ ನಟಿ ಮಮತಾ ಕುಲಕರ್ಣಿಗೆ ಸೇರಿದ ್ನ ಹೊಂದಿರುವ ಕನಿಷ್ಠ ಎಂಟು ಬ್ಯಾಂಕ್ ಖಾತೆಗಳನ್ನು ಥಾಣೆ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಗುಜರಾತ್,ಮುಂಬೈ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿರುವ ಬ್ಯಾಂಕ್‌ಗಳಲ್ಲಿರುವ ಆಕೆಯ ಖಾತೆಗಳಲ್ಲಿ 90 ಲಕ್ಷ ರೂ.ಗೂ ಅಧಿಕ ಹಣವನ್ನು ಠೇವಣಿಯಿರಿಸಲಾಗಿತ್ತು.
ಅಂತಾರಾಷ್ಟ್ರೀಯ ಮಾದಕದ್ರವ್ಯ ಕಳ್ಳಸಾಗಾಣೆದಾರ ವಿಕಿಗೋಸ್ವಾಮಿ ಶಾಮೀಲಾಗಿರುವ ಪ್ರಕರಣದಲ್ಲಿಯೂ ಮಮತಾ ಕುಲಕರ್ಣಿಯನ್ನು ಪ್ರಮುಖ ಆರೋಪಿಯೆಂದು ಹೆಸರಿಸಲಾಗಿದೆ. ಮಮತಾ ಕುಲಕರ್ಣಿಯ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಡ್ರಗ್ಸ್ ಜಾಲವು ಬಳಸಿಕೊಳ್ಳುತ್ತಿದೆಯೆಂಬ ಶಂಕೆಯ ಹಿನ್ನೆಲೆಯಲ್ಲಿ ಆಕೆಯ ಎಲ್ಲಾ ಎಂಟು ಬ್ಯಾಂಕ್ ಖಾತೆಗಳನ್ನು ಈ ವಾರ ಮುಟ್ಟುಗೋಲು ಹಾಕಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಲಾಡ್‌ನ ಖಾಸಗಿ ಬ್ಯಾಂಕ್‌ನಲ್ಲಿರುವ ಖಾತೆಯೊಂದರಲ್ಲೇ ಕುಲಕರ್ಣಿ 67 ಲಕ್ಷ ರೂ. (ವಿದೇಶಿ ಕರೆನ್ಸಿ)ಗಳನ್ನು ಹೊಂದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಉಳಿದ 26 ಲಕ್ಷ ರೂ.ಗಳನ್ನು ಕಲ್ಯಾಣ್, ಬದ್ಲಾಪುರ್ (ಠಾಣೆ), ಪರೇಲ್,ನರಿಮನ್ ಪಾಯಿಂಟ್, ಧಾರಾವಿ, ರಾಜ್‌ಕೋಟ್ ಹಾಗೂ ಭುಜ್ (ಗುಜರಾತ್)ನಲ್ಲಿರುವ ಬ್ಯಾಂಕ್ ಖಾತೆಗಳಲ್ಲಿರಿಸಲಾಗಿತ್ತು.
ಮಮತಾ ಕುಲಕರ್ಣಿಯ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಆಕೆಯ ಹಿರಿಯ ಸೋದರಿ ಮತ್ತಿತರರನ್ನು ತನಿಖಾಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.





