ವಡೋದರ: ಡಿಸಿ ವಿರುದ್ಧ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ರಿಯಲ್ ಎಸ್ಟೇಟ್ ಏಜೆಂಟ್
ವಡೋದರ, ಜು.30: ಡಿಸಿ ವಿರುದ್ಧ ಪತ್ರ ಬರೆದಿಟ್ಟು ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಫತೇಹ್‌ಗಂಜ್‌ನಲ್ಲಿ ನಡೆದಿದೆ.
ಬಿಜೆಪಿ ಕಾರ್ಯಕರ್ತ ಎನ್ನಲಾದ ಕಪಿಲ್ ಪಾಂಡ್ಯ(58) ಆತ್ಮಹತ್ಯೆಗೆ ಶರಣಾದ ರಿಯಲ್ ಎಸ್ಟೇಟ್ ಏಜೆಂಟ್. ತಮ್ಮ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಬಿಜೆಪಿ ಮುಖಂಡರು ಹಾಗೂ ಜಿಲ್ಲಾಧಿಕಾರಿ ಕಾರಣ ಎಂದು ಬರೆಯಲಾಗಿದೆ. ಆದರೆ ಆತ ಬಿಜೆಪಿ ಕಾರ್ಯಕರ್ತನೇ ಎನ್ನುವುದು ಖಚಿತವಾಗಿ ತಿಳಿದಿಲ್ಲ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷೆ ಹಾಗೂ ಸಂಸದೆ ರಂಜನಾ ಭಟ್ ತಿಳಿಸಿದ್ದಾರೆ.
ನನ್ನ ಕುಟುಂಬವನ್ನೂ ನಿರ್ಲಕ್ಷಿಸಿ 14 ವರ್ಷಗಳ ಕಾಲ ಬಿಜೆಪಿ ಹಾಗೂ ನರೇಂದ್ರ ಮೋದಿ ಪರವಾಗಿ ಇದ್ದು ಜೀವನ ವ್ಯರ್ಥ ಮಾಡಿಕೊಂಡಿದ್ದೇನೆ ಎಂದು ಪಾಂಡ್ಯ ಪತ್ರದಲ್ಲಿ ಬರೆದಿರುತ್ತಾರೆ. ಜಿಲ್ಲಾಧಿಕಾರಿ ಲೋಚನ್ ಸೆಹ್ರಾ ಸೇರಿದಂತೆ ಹಲವಾರು ಮಂದಿ ಜಿಲ್ಲಾ ಅಧಿಕಾರಿಗಳನ್ನು ಕೂಡಾ ತಮ್ಮ ಆತ್ಮಹತ್ಯೆಗೆ ಹೊಣೆ ಎಂದು ಪಾಂಡ್ಯ ದೂರಿದ್ದಾಗಿ ಪೊಲೀಸರು ಹೇಳಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡ ಮತ್ತು ಕೊಯಾಲಿ ಜಿಲ್ಲಾಪಂಚಾಯತ್ ಅಧ್ಯಕ್ಷ ಅಶ್ವಿನ್ ಪಟೇಲ್‌ರವರ ಹೆಸರನ್ನು ಕೂಡ ಪಾಂಡ್ಯ ಉಲ್ಲೇಖಿಸಿದ್ದಾರೆ. ಆದರೆ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
ಭೂ ಪರಿವರ್ತನೆ ವಿಷಯದಲ್ಲಿ ಭೂಮಾಲಕರಿಗೆ ಈತ ಸಹಕರಿಸುತ್ತಿದ್ದ ಎನ್ನಲಾಗಿದ್ದು ತಮ್ಮದೇ ಸ್ವಂತ ಜಮೀನಿನ ಭೂ ಪರಿವರ್ತನೆ ಕಡತ 2014ರಿಂದಲೂ ಬಾಕಿ ಇದ್ದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಲಾಗುತ್ತಿದೆ.





