ಚೆನ್ನೈ ವಿಮಾನ ನಿಲ್ದಾಣದಲ್ಲಿ ನೂರಾರು ಆಮೆಗಳು!
ಚೆನ್ನೈ, ಜು.30: ಕಸ್ಟಮ್ಸ್ ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೊ ಅಧಿಕಾರಿಗಳು 500 ಜೀವಂತ ಆಮೆಗಳನ್ನು ಗುರುವಾರ ರಾತ್ರಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಥಾಯ್ ಏರ್‌ವೇಸ್ ವಿಮಾನವೊಂದರಲ್ಲಿ ಇವುಗಳನ್ನು ಮಲೇಷ್ಯಕ್ಕೆ ಕಳ್ಳಸಾಗಣೆ ಮಾಡುವ ಉದ್ದೇಶವಿತ್ತೆನ್ನಲಾಗಿದೆ.
ಅಂಬತ್ತೂರಿನಲ್ಲಿರುವ ರಫ್ತು ಘಟಕವೊಂದು ಏಡಿಗಳನ್ನು ವಿಮಾನದಲ್ಲಿ ರಫ್ತು ಉದ್ದೇಶದಿಂದ ಸಾಗಿಸಲಾಗುವುದು ಎಂದು ಹೇಳಿತ್ತೆಂದು ಬ್ಯೂರೋ ಉಪ ನಿರ್ದೇಶಕ ಎಸ್.ಆರ್.ವಿ. ಮೂರ್ತಿ ಹೇಳಿದ್ದಾರೆ. ಜೀವಂತ ಆಮೆಗಳನ್ನು 56 ಬಟ್ಟೆ ಚೀಲಗಳಲ್ಲಿ ಪ್ಯಾಕ್ ಮಾಡಿ ಸತ್ತ ಏಡಿಗಳ ಅಡಿಯಲ್ಲಿ ಅಡಗಿಸಿಡಲಾಗಿತ್ತು. ಹೀಗೆ ಪ್ಯಾಕ್ ಮಾಡಲಾದ ವಸ್ತುವನ್ನು ವಿಮಾನ ನಿಲ್ದಾಣದಲ್ಲಿ ಸ್ಕಾನ್ ಮಾಡಿದಾಗ ಸಂಶಯಗೊಂಡ ಕಸ್ಟಮ್ಸ್ ಅಧಿಕಾರಿಗಳು ಒಂದು ಬ್ಯಾಗನ್ನು ತೆರೆದು ನೋಡಿದಾಗ ಅದರಲ್ಲಿ ಜೀವಂತ ಆಮೆಗಳು ಪತ್ತೆಯಾದವು. ಇಂತಹ ಸ್ಟಾರ್ ಆಮೆಗಳನ್ನು ಕೊಳತ್ತೂರು ಹಾಗೂ ರೆಡ್‌ಹಿಲ್ ಪ್ರದೇಶಗಳಲ್ಲಿ ಬೆಳೆಸಿ ಅವುಗಳನ್ನು ರೋಯಪುರಂ, ವಾಶರ್‌ಮೆನ್‌ಪೇಟೆ ಹಾಗೂ ತೊಂಡರಿಪೇಟೆಗಳಲ್ಲಿ ಮಾರಲಾಗುತ್ತಿದೆ.
ವಶಪಡಿಸಿಕೊಳ್ಳಲಾದ ಆಮೆಗಳನ್ನು ಅಧಿಕಾರಿಗಳು ಗುಯಿಂಡಿ ನ್ಯಾಶನಲ್ ಪಾರ್ಕ್ ಪ್ರದೇಶದಲ್ಲಿ ಬಿಡುಗಡೆ ಮಾಡಲಿದ್ದಾರೆ. ಅವುಗಳ ವೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ರೂ. 50 ಲಕ್ಷ., ವಿದೇಶಗಳಲ್ಲಿ ಅವುಗಳನ್ನು ಸಾಕಲು, ಔಷಧಕ್ಕಾಗಿ ಬಳಸಲಾಗುವುದರಿಂದ ಅವುಗಳಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನಲಾಗಿದೆ.





