ನಾಗರಿಕ ಕುಲದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ: ನ್ಯಾ. ನಾಗರಾಜ
‘ಹೆಣ್ಣು ಮಕ್ಕಳನ್ನು ಉಳಿಸಿ’ ಎಂಬ ಕಾನೂನು ಅರಿವು ಕಾರ್ಯಕ್ರಮ

ವೀರಾಜಪೇಟೆ, ಜು.30: ಇತ್ತೀಚೆಗೆ ನಾಗರಿಕ ಕುಲದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿವೆ. ಭ್ರೂಣ ಹತ್ಯೆ ತಡೆದು ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಕ್ಕೆ ಕಾನೂನಿನಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಎರಡನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಂ.ನಾಗರಾಜ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ವೀರಾಜಪೇಟೆ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಹೆಣ್ಣು ಮಕ್ಕಳನ್ನು ಉಳಿಸಿ’ ಎಂಬ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಳಿಕ ಮಾತನಾಡಿದ ಅವರು, ಭೂಮಿಯಲ್ಲಿ ಹೆಣ್ಣು ಮಕ್ಕಳು ಮತ್ತು ಪ್ರಕೃತಿ ಎರಡೂ ಒಂದೆ. ಅಳಿವು-ಉಳಿವು ಎರಡೂ ಮಹಿಳೆಯಿಂದಲೇ ಆಗುವುದು ಎಂದರಲ್ಲದೆ ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾಧ. ಇತ್ತೀಚೆಗೆ ಪರಿಸರ ನಾಶವಾಗುತ್ತಿದ್ದು ವಿದ್ಯಾರ್ಥಿಗಳು ಗಿಡ ನೆಟ್ಟು ಹೆಚ್ಚು ಮರಗಳನ್ನು ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಿ.ಕೆ.ಸರಸ್ವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿ ಮಹಿಳೆಯರು- ಪುರುಷರು ಎಲ್ಲರೂ ಸರಿ ಸಮಾನರು. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದರು. ವಕೀಲ ಬಿ.ಬಿ.ಮಾದಪ್ಪ ಮಾತನಾಡಿ, ಹೆಣ್ಣು ಮಕ್ಕಳನ್ನು ಉಳಿಸಿ ಎಂಬ ವಿಷಯದ ಬಗ್ಗೆ ಹಾಗೂ ಸಿಂಧೂರ ಎನ್.ಸ್ವಾಮಿ ಅವರು ಮಹಿಳೆ ಮತ್ತು ಕಾನೂನು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶೆ ಕೆ.ಶರ್ಮಿಳಾ ಕಾಮತ್, ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕಾಮತ್, ಕಾರ್ಯದರ್ಶಿ ಬಿ.ಎನ್.ಸುಬ್ಬಯ್ಯ, ವಕೀಲ ನರೇಂದ್ರ ಕಾಮತ್, ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರೊ, ಕೆ.ಡಿ.ನಿರ್ಮಲಾ ಸ್ವಾಗತಿಸಿ, ಉಪನ್ಯಾಸಕಿ ಟಿ.ಸಿ.ಗೀತಾ ನಾಯ್ಡು ನಿರೂಪಿಸಿ, ಪ್ರೊ. ಎಂ.ಎಂ.ಸುನೀತಾ ವಂದಿಸಿದರು.







