ಜನರನ್ನು ಆತಂಕಕ್ಕೆ ದೂಡುವುದೇ ರಾಜಕೀಯ ಪಕ್ಷಗಳ ಕೆಲ: ಸಾಹಿತಿ ಡಾ. ನಾ.ಡಿಸೋಜ
.jpg)
ಸಾಗರ,ಜು.30: ಮಹಾದಾಯಿ ನದಿನೀರು ಹಂಚಿಕೆಗೆ ಸಂಬಂಧಪಟ್ಟಂತೆ ಕರ್ನಾಟಕ ಸರಕಾರ ಟ್ರಿಬ್ಯೂನಲ್ ಎದುರು ಅಸಮರ್ಪಕವಾಗಿ ವಾದ ಮಂಡಿಸಿರುವುದೇ ನ್ಯಾಯಾಲಯದ ತೀರ್ಪು ರಾಜ್ಯದ ವಿರುದ್ಧವಾಗಿ ಬರಲು ಕಾರಣವಾಗಿದೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಶನಿವಾರ ಮಹಾದಾಯಿ ನದಿನೀರು ಹಂಚಿಕೆ ಸಂಬಂಧ ನ್ಯಾಯಾಲಯ ನೀಡಿರುವ ತೀರ್ಪನ್ನು ಖಂಡಿಸಿ, ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅನೇಕ ವರ್ಷಗಳಿಂದ ಕಳಸಾ-ಬಂಡೂರಿ ನಾಲೆ ವಿವಾದ ನಡೆಯುತ್ತಿದೆ. ಇದನ್ನು ಬಗೆಹರಿಸಲು ಎರಡೂ ಪ್ರಮುಖ ರಾಜಕೀಯ ಪಕ್ಷಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ಇದನ್ನು ರಾಜಕೀಯ ವಿಷಯವಾಗಿಸಿಕೊಂಡು ರಾಜ್ಯದ ಹಿತವನ್ನು ರಾಜಕೀಯ ಪಕ್ಷಗಳು ಮರೆಯುತ್ತಿರುವುದು ಖಂಡನೀಯ. ಜನರನ್ನು ಆತಂಕದಲ್ಲಿ ಇರಿಸುವ ಕೆಲಸಕ್ಕೆ ರಾಜಕೀಯ ಪಕ್ಷಗಳು ಕೈಹಾಕಬಾರದು ಎಂದು ಒತ್ತಾಯಿಸಿದರು.
ಕೇಂದ್ರದಲ್ಲಿ ರಾಜ್ಯದ 17 ಸಂಸದರು ಇದ್ದಾರೆ. ಆದರೆ ಗೋವಾ ರಾಜ್ಯದ 2 ಸಂಸದರ ಎದುರು ನಮ್ಮವರು ಸೋತಿರುವುದು ನಿಜಕ್ಕೂ ದುರದೃಷ್ಟಕರ. ರಾಜ್ಯದ ನೆಲಜಲ ಸಮಸ್ಯೆ ಬಂದಾಗ ಕನ್ನಡಿಗರು ಒಕ್ಕೊರಲಿನ ಧ್ವನಿ ಎತ್ತಿ ಹೋರಾಟ ಕೈಗೆತ್ತಿಕೊಳ್ಳಬೇಕು ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿತಕರ ಜೈನ್ ಮಾತನಾಡಿ, ಮಹಾದಾಯಿ ನದಿನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ರಾಜಕಾರಣಿಗಳಿಗೆ ಮನಸ್ಸಿಲ್ಲ. ಇದನ್ನು ತಮ್ಮ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆಯೆ ವಿನಃ, ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸದೆ ಇರುವುದು ಖಂಡನೀಯ.ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ಮಾತನಾಡಿ, ಯಾವುದೇ ಸರಕಾರ ಇದ್ದರೂ ಕನಿಷ್ಠ ಕುಡಿಯುವ ನೀರನ್ನು ಸಮರ್ಪಕವಾಗಿ ಕೊಡುವ ಇಚ್ಛಾಶಕ್ತಿ ಹೊಂದಿರಬೇಕು. ನೀರು ಕೇಳಿದರೆ ಲಾಠಿಚಾರ್ಜ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಳುವ ಸರಕಾರಗಳು ರೈತರ, ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಕೇಂದ್ರ ಸರಕಾರ ರಾಷ್ಟ್ರೀಯ ಜಲನೀತಿ ರೂಪಿಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ, ಕಾರ್ಯದರ್ಶಿ ಎಚ್.ಎಂ.ಪಂಡಿತಾರಾಧ್ಯ, ರೈತ ಸಂಘದ ತಾಲೂಕು ಶಾಖೆ ಅಧ್ಯಕ್ಷ ಗೂರಲಕೆರೆ ಚಂದ್ರಶೇಖರ್, ದಲಿತ ಸಂಘರ್ಷ ಸಮಿತಿಯ ಲಕ್ಷ್ಮಣ ಸಾಗರ್, ನಾಗರಾಜಸ್ವಾಮಿ, ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯ ವಿಜಯಕುಮಾರ್, ತನ್ವೀರ್, ಕರ್ನಾಟಕ ರಕ್ಷಣಾ ವೇದಿಕೆಯ ಸೌಭಾಗ್ಯ, ಆಶಾ, ಲೇಖಕ ವಿಲಿಯಂ, ನಗರಸಭಾ ಸದಸ್ಯರಾದ ರವಿ ಜಂಬಗಾರು, ಡಿ.ದಿನೇಶ್‌ಮತ್ತಿತರರು ಉಪಸ್ಥಿತರಿದ್ದರು.







