ನಿಖರ ಸುದ್ದಿ ನೀಡುವಲ್ಲಿ ಮಾಧ್ಯಮಗಳು ವಿಫಲವಾಗದಿರಲಿ: ವಿನೋದ್ ಚಂದ್ರ
ಪತ್ರಿಕಾ ದಿನಾಚರಣೆ

ಚಿಕ್ಕಮಗಳೂರು, ಜು.30: ಬ್ರೇಕಿಂಗ್ ನ್ಯೂಸ್‌ನ ಧಾವಂತದಲ್ಲಿ ಆತುರಕ್ಕೆ ಬಿದ್ದು ನಿಖರವಾದ ಸುದ್ದಿ ನೀಡುವಲ್ಲಿ ಮಾಧ್ಯಮಗಳು ವಿಫಲವಾಗಬಾರದು ಎಂದು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ ಸಲಹೆ ನೀಡಿದ್ದಾರೆ.
ನಗರದ ಚಿಕ್ಕಮಗಳೂರು ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಪ್ರೆಸ್‌ಕ್ಲಬ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಅಕ್ರಮ ಮತ್ತು ಭ್ರಷ್ಟಾಚಾರದಂತಹ ಪ್ರಕರಣಗಳು ಬಯಲಾಗುತ್ತಿವೆ. ಕೆಟ್ಟ ವ್ಯವಸ್ಥೆ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇದರಿಂದಾಗಿ ಜನತೆ ಮಾಧ್ಯಮಗಳ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸುತ್ತದೆ ಎಂದು ನಂಬಿದ್ದಾರೆ. ಈ ನಂಬಿಕೆಯನ್ನು ಮಾಧ್ಯಮಗಳು ಕಳೆದುಕೊಳ್ಳಬಾರದು ಎಂದರು.
ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ಮಾತನಾಡಿ, ಸುದ್ದಿಯ ನಿಖರತೆ ಪತ್ರಿಕೋದ್ಯಮದ ಆತ್ಮ. ಅದನ್ನು ಕಳೆದುಕೊಂಡರೆ ಮಾಧ್ಯಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೆಸ್‌ಕ್ಲಬ್ ಅಧ್ಯಕ್ಷ ಸಿ.ಸುರೇಶ್, ಬೆಳಗಾವಿಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ನಡೆಸಲಾದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಎ.ಎನ್.ಮಹೇಶ್, ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಎನ್.ಪ್ರವೀಣ್, ನಿರ್ದೇಶಕ ಬಿ.ಎಂ.ರವಿ, ಪತ್ರಕರ್ತ ಅನಿಲ್, ಕ್ಲಬ್‌ನ ಖಜಾಂಚಿ ದಿನೇಶ್ ಪಟವರ್ಧನ್ ಮತ್ತಿತರರು ಉಪಸ್ಥಿತರಿದ್ದರು.







