ಕಡೂರು: ರಸ್ತೆ ತಡೆ ನಡೆಸಿ ಆಕೊ್ರೀಶ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆಗಳು
ಮಹಾದಾಯಿ ತೀರ್ಪು ವಿರೋಧಿಸಿ ಬಂದ್‌ಗೆ ಸಂಪೂರ್ಣ ಬೆಂಬಲ

ಕಡೂರು, ಜು.30: ಮಹಾದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಗಿಜಿಗುಡುತ್ತಿದ್ದ ಕೆ.ಎಲ್.ವಿ. ವೃತ್ತ, ಮಲ್ಲೇಶ್ವರ ವೃತ್ತ, ಬಸವೇಶ್ವರ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಹೊಸ ಮತ್ತು ಹಳೆ ಬಸ್ ನಿಲ್ದಾಣಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ರಾಜ್ಯ ರಸ್ತೆ ಸಾರಿಗೆ ಸಂಘಟನೆಗಳು, ರೈತ ಸಂಘ, ಕಾರ್ಮಿಕರ ಸಂಘಟನೆಗಳು ಸೇರಿದಂತೆ ಹಲವು ಸಂಸ್ಥೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಕಡೂರು ಪಟ್ಟಣದಲ್ಲಿ ಯಶಸ್ವಿಯಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಪಟ್ಟಣದ ಬಹುತೇಕ ಅಂಗಡಿ-ಮುಂಗಟ್ಟುಗಳು ತೆರೆಯಲಿಲ್ಲ. ನಾಗರಿಕರು ಸ್ವಯಂ ಪ್ರೇರಿತರಾಗಿ ವ್ಯಾಪಾರ-ವಹಿವಾಟನ್ನು ಮಾಡಲಿಲ್ಲ. ಆದರೂ ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದ ತುಂಬ ಪ್ರದಕ್ಷಿಣೆ ಹಾಕಿ, ಅಲ್ಲೊಂದು-ಇಲ್ಲೊಂದು ತೆರೆದಿದ್ದ ಒಂದೆರಡು ಸಣ್ಣ-ಪುಟ್ಟ ಅಂಗಡಿಗಳನ್ನು ಮುಚ್ಚಿಸಿದರು.
ಸದಾ ಜನರಿಂದ ತುಂಬಿರುತ್ತಿದ್ದ ಬಸ್ ನಿಲ್ದಾಣಗಳು ಖಾಲಿಯಾಗಿ ನಿರ್ಜನ ಪ್ರದೇಶದಂತೆ ಗೋಚರಿಸುತ್ತಿದ್ದವು. ಅಗತ್ಯ ಸೇವೆಗಳಾದ ಹಾಲು, ಔಷಧ, ತರಕಾರಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು, ಆದರೂ ತರಕಾರಿ ಮತ್ತು ಔಷಧ ಅಂಗಡಿಯವರು ಗ್ರಾಹಕರಿಲ್ಲದೆ ಪರದಾಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ, ಶಿವರಾಮೇಗೌಡ ಬಣ ಹಾಗೂ ಪ್ರವೀಣ್ ಶೆಟ್ಟಿ ಬಣದ ತಾಲೂಕು ಸಂಚಾಲಕರಾದ ಸಿದ್ದಪ್ಪ(ನಾಗಭೂಷಣ್), ವಿಜಯಕುಮಾರ್, ರುದ್ರೇಗೌಡ ರವರ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಕೆಎಲ್‌ವಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ತಡೆ ನಡೆಸಿದರು.
ಜಾತ್ಯತೀತ ಜನತಾದಳದ ತಾಲೂಕು ಘಟಕ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ ಮತ್ತು ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣಪ್ಪ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶೂದ್ರ ಶ್ರೀನಿವಾಸ್ ನೇತೃತ್ವದಲ್ಲಿ ಹಲವಾರು ನಾಗರಿಕರು ಮೆರವಣಿಗೆ ನಡೆಸಿ ತೀರ್ಪಿನ ವಿರುದ್ಧ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಜಯಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜೈನ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯ ಉಳುಕಿನಕಲ್ಲು ಬಳಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಹಾಗೂ ಸಂಸದರ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರಗಳು ತೆರೆಯದೆ ಬಂದ್‌ಗೆ ಬೆಂಬಲ ಸೂಚಿಸಿದವು.ಸರಕಾರಿ ಕಚೆೇರಿಗಳು ತೆರೆದಿದ್ದರೂ ಅಲ್ಲಿ ಕೇವಲ ಬೆರಳೆಣಿಕೆಯ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಕಂಡುಬಂತು, ನ್ಯಾಯಾಲಯದ ಕಲಾಪಗಳು ನಡೆಯಲಿಲ್ಲ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಶ್ರೀವಿನಾಯಕ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಹರುವನಹಳ್ಳಿ ಶ್ರೀನಿವಾಸ್ ಮತ್ತು ಕಾರ್ಯದರ್ಶಿ ಎನ್.ಜಿ. ಕೊಪ್ಪಲು ಮಹೇಶ್ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.







