ಮೈಸೂರು ವಿಭಾಗಮಟ್ಟದ ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಪ್ರಾಕೃತಿಕ ವಿಕೋಪ ನಿರ್ವಹಣೆ ತರಬೇತಿ ಶಿಬಿರ

ಉಡುಪಿ, ಜು.30: ಜಪಾನ್ ದೇಶ ದಲ್ಲಿ ಭೂ ಕಂಪನ ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಆ ರೀತಿಯ ವ್ಯವಸ್ಥೆ ನಮ್ಮ ದೇಶದಲ್ಲೂ ಬರಬೇಕಾಗಿದೆ ಎಂದು ರಾಜ್ಯ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ ಉಡುಪಿ ಜಿಲ್ಲಾ ಸಂಸ್ಥೆ ಹಾಗೂ ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಅಲೆವೂರು ಪ್ರಗತಿನಗರದಲ್ಲಿರುವ ಸಂಸ್ಥೆಯ ಡಾ.ವಿ.ಎಸ್.ಆಚಾರ್ಯ ತರಬೇತಿ ಕೇಂದ್ರದಲ್ಲಿ ಮೈಸೂರು ವಿಭಾಗಮಟ್ಟದ ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಆಯೋಜಿಸಲಾದ ಐದು ದಿನಗಳ ಪ್ರಾಕೃತಿಕ ವಿಕೋಪ ನಿರ್ವಹಣೆ ತರಬೇತಿ ಶಿಬಿರ ಮತ್ತು ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಹಾಯಕ ಅರಣ್ಯ ಉಪಸಂರಕ್ಷಣಾಧಿಕಾರಿ ಸತೀಶ್ ಬಾಬಾ ರೈ, ಭಾರತ್ ಸ್ಕೌಟ್ಸ್ ಮತ್ತು ಗೈಡ್‌ನ ರಾಜ್ಯ ಉಪಾಧ್ಯಕ್ಷ ಶಾಂತಾ ವಿ. ಆಚಾರ್ಯ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಎಂ. ಭಟ್, ಉಪಾಧ್ಯಕ್ಷೆ ಜ್ಯೋತಿ ಜೆ.ಪೈ, ಜಿಲ್ಲಾ ಮುಕ್ತ ಆಯುಕ್ತ ಕೆ.ಬಿ.ರಾವ್ ಭಾಗ ವಹಿಸಿದ್ದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಎಡ್ವಿನ್ ಆಳ್ವ, ಜಿಲ್ಲಾ ಗೈಡ್ ಆಯುಕ್ತೆ ರಾಜಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು. ಡಾ.ಪ್ರಭಾತ್ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ನಾಯಕ ಪ್ರತೀಮ್‌ಕುಮಾರ್ ಶಿಬಿರದ ಮಾಹಿತಿ ನೀಡಿದರು. ಜಿಲ್ಲಾ ಕಾರ್ಯದರ್ಶಿ ಶೇಖರ್ ಕಲ್ಮಾಡಿ ಸ್ವಾಗತಿಸಿದರು. ಜಿಲ್ಲಾ ತರಬೇತಿ ಆಯುಕ್ತ ಕೊಗ್ಗ ಗಾಣಿಗ ವಂದಿಸಿದರು. ಸವಿತಾ ಜೋಗಿ ಕಾರ್ಯಕ್ರಮ ನಿರೂಪಿಸಿದರು.





