ಪ್ರಥಮ ಟೆಸ್ಟ್: ಆಸ್ಟ್ರೇಲಿಯ ವಿರುದ್ಧ ಶ್ರೀಲಂಕಾಕ್ಕೆ ಐತಿಹಾಸಿಕ ಜಯ

ಪಲ್ಲೆಕಲ್, ಜು.30: ಶ್ರೀಲಂಕಾದ ಹಿರಿಯ ಸ್ಪಿನ್ನರ್ ರಂಗನ ಹೆರಾತ್ ಹಾಗೂ ಶತಕ ವೀರ ಕುಶಾಲ್ ಮೆಂಡಿಸ್ ಸಾಹಸದ ಸಹಾಯದಿಂದ ಆತಿಥೇಯ ಶ್ರೀಲಂಕಾ ತಂಡ ವಿಶ್ವದ ನಂ.1 ತಂಡ ಆಸ್ಟ್ರೇಲಿಯ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯವನ್ನು 106 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಶನಿವಾರ ಇಲ್ಲಿ ನಡೆದ ಐದನೆ ಹಾಗೂ ಅಂತಿಮ ದಿನದಾಟದಲ್ಲಿ ಗೆಲ್ಲಲು 268 ರನ್ ಸವಾಲು ಪಡೆದಿದ್ದ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ 161 ರನ್‌ಗೆ ಆಲೌಟಾಯಿತು. ಪಂದ್ಯದಲ್ಲಿ 103 ರನ್ ವೆಚ್ಚದಲ್ಲಿ 9 ವಿಕೆಟ್‌ಗಳನ್ನು ಉಡಾಯಿಸಿರುವ ಸ್ಪಿನ್ನರ್ ಹೆರಾತ್ ಶ್ರೀಲಂಕಾದ ಗೆಲುವಿನಲ್ಲಿ ದೊಡ್ಡ ಕಾಣಿಕೆ ನೀಡಿದರು.
3 ವಿಕೆಟ್ ನಷ್ಟಕ್ಕೆ 83 ರನ್‌ನಿಂದ ಅಂತಿಮ ದಿನದಾಟವನ್ನು ಆರಂಭಿಸಿದ್ದ ಆಸ್ಟ್ರೇಲಿಯದ ಪರ ನಾಯಕ ಸ್ಟೀವನ್ ಸ್ಮಿತ್(55) ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಯತ್ನಿಸಿದರು. ಆದರೆ, ಮತ್ತೊಂದು ತುದಿಯಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಸ್ಟೀವ್ ಒ’ಕೀಫೆ ವಿಕೆಟ್‌ನ್ನು ಕಬಳಿಸಿದ ಹೆರಾತ್ ಆಸ್ಟ್ರೇಲಿಯ ಹೋರಾಟಕ್ಕೆ ತೆರೆ ಎಳೆದರು.
ಶ್ರೀಲಂಕಾ ತಂಡ ಆಸ್ಟ್ರೇಲಿಯ ವಿರುದ್ಧ ಆಡಿರುವ ಕಳೆದ 27 ಪಂದ್ಯಗಳಲ್ಲಿ ಎರಡನೆ ಜಯ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 117 ರನ್‌ಗೆ ಆಲೌಟಾಗಿ ಆಸ್ಟ್ರೇಲಿಯಕ್ಕೆ 86 ರನ್ ಮುನ್ನಡೆ ಬಿಟ್ಟುಕೊಟ್ಟಿದ್ದ ಶ್ರೀಲಂಕಾ ತಂಡಕ್ಕೆ ಎರಡನೆ ಇನಿಂಗ್ಸ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಕುಶಾಲ್ ಮೆಂಡಿಸ್(178) ಆಸರೆಯಾದರು. ಮೆಂಡಿಸ್ ದಿಟ್ಟ ಬ್ಯಾಟಿಂಗ್‌ನ ಮೂಲಕ ಎದುರಾಳಿ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ನೀಡಲು ನೆರವಾದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಶ್ರೀಲಂಕಾ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ನಂಬರ್ಸ್ ಗೇಮ್
17: ಶ್ರೀಲಂಕಾ ತಂಡ 17 ವರ್ಷಗಳ ಬಳಿಕ ಆಸ್ಟ್ರೇಲಿಯ ವಿರುದ್ಧ ಎರಡನೆ ಗೆಲುವು ಸಾಧಿಸಿದೆ. 1999 ಸೆಪ್ಟಂಬರ್ 11 ರಂದು ಕ್ಯಾಂಡಿಯಲ್ಲಿ ಮೊದಲ ಜಯ ಸಾಧಿಸಿತ್ತು.
2: ಶ್ರೀಲಂಕಾ ತಂಡ ಆಸ್ಟ್ರೇಲಿಯ ವಿರುದ್ಧ ಈ ತನಕ ಎರಡು ಜಯ ಸಾಧಿಸಿದೆ. ಮೊದಲ ಗೆಲುವು ಕ್ಯಾಂಡಿಯ ಅಸ್‌ಗಿರಿಯಾ ಸ್ಟೇಡಿಯಂನಲ್ಲಿ ದಾಖಲಿಸಿತ್ತು. ಆ ಬಳಿಕ ಶ್ರೀಲಂಕಾ ತಂಡ ಆಸೀಸ್ ವಿರುದ್ಧ 10 ಟೆಸ್ಟ್ ಪಂದ್ಯಗಳಲ್ಲಿ ಸೋಲು ಹಾಗೂ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು.
7: ಆಸ್ಟ್ರೇಲಿಯ ತಂಡ ಏಷ್ಯಾದಲ್ಲಿ ಸತತ ಏಳನೆ ಟೆಸ್ಟ್ ಪಂದ್ಯವನ್ನು ಸೋತಿದೆ. 2013ರಲ್ಲಿ ಭಾರತ ವಿರುದ್ಧ ನಾಲ್ಕು ಪಂದ್ಯಗಳು ಹಾಗೂ 2014-15ರಲ್ಲಿ ಯುಎಇಯಲ್ಲಿ ಪಾಕಿಸ್ತಾನದ ವಿರುದ್ಧ 2 ಟೆಸ್ಟ್ ಪಂದ್ಯವನ್ನು ಸೋತಿತ್ತು. 2011ರಲ್ಲಿ ಶ್ರೀಲಂಕಾದ ವಿರುದ್ಧ ಗಾಲೆಯಲ್ಲಿ ಜಯ ಸಾಧಿಸಿದ ಬಳಿಕ ಉಪಖಂಡದಲ್ಲಿ ಗೆಲುವು ಸಾಧಿಸಿಲ್ಲ.
15: ಪಲ್ಲೆಕಲ್ ಟೆಸ್ಟ್‌ನಲ್ಲಿ 15 ಬ್ಯಾಟ್ಸ್‌ಮನ್‌ಗಳು ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಾಖಲಾದ ಅತ್ಯಂತ ಗರಿಷ್ಠ ಸಂಖ್ಯೆಯ ಎಲ್ಬಿಡಬ್ಲು ಇದಾಗಿದೆ.
24: ಆಸ್ಟ್ರೇಲಿಯ ವಿರುದ್ಧ ಎರಡನೆ ಇನಿಂಗ್ಸ್‌ನಲ್ಲಿ 54 ರನ್‌ಗೆ 5 ವಿಕೆಟ್ ಪಡೆದ ರಂಗನ ಹೆರಾತ್ ಟೆಸ್ಟ್‌ನಲ್ಲಿ 25ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದರು.
1: ಸ್ಟೀವನ್ ಸ್ಮಿತ್ ಆಸ್ಟ್ರೇಲಿಯದ ನಾಯಕನಾಗಿ ಮೊದಲ ಸೋಲು ಕಂಡರು. ಭಾರತ ವಿರುದ್ಧ 3 ಟೆಸ್ಟ್‌ಗಳಲ್ಲಿ ನಾಯಕರಾಗಿದ್ದ ಸ್ಮಿತ್ 2ರಲ್ಲಿ ಡ್ರಾ, ಒಂದರಲ್ಲಿ ಜಯ ಸಾಧಿಸಿದ್ದರು. ನ್ಯೂಝಿಲೆಂಡ್ ವಿರುದ್ಧದ 6 ಟೆಸ್ಟ್‌ನಲ್ಲಿ 4 ಜಯ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ 2 ಟೆಸ್ಟ್ ಪಂದ್ಯವನ್ನು ಜಯಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲಿ ಇನಿಂಗ್ಸ್: 117 ರನ್‌ಗೆ ಆಲೌಟ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 203 ರನ್‌ಗೆ ಆಲೌಟ್
ಶ್ರೀಲಂಕಾ ಎರಡನೆ ಇನಿಂಗ್ಸ್: 353 ರನ್‌ಗೆ ಆಲೌಟ್
ಆಸ್ಟ್ರೇಲಿಯ ಎರಡನೆ ಇನಿಂಗ್ಸ್:
88.3 ಓವರ್‌ಗಳಲ್ಲಿ 161 ರನ್‌ಗೆ ಆಲೌಟ್ (ಸ್ಟೀವನ್ ಸ್ಮಿತ್ 55, ಬರ್ನ್ಸ್ 29, ಮಾರ್ಷ್ 25, ರಂಗನ ಹೆರಾತ್ 5-54, ಲಕ್ಷಣ್ 3-49)
ಪಂದ್ಯಶ್ರೇಷ್ಠ: ಕುಶಾಲ್ ಮೆಂಡಿಸ್.







