ಶಿಕ್ಷಕಿಯ ಕಣ್ಣು ತೆರೆಸಿದ ವಿದ್ಯಾರ್ಥಿನಿ
ವಿದ್ಯಾರ್ಥಿಗಳಿಗೆ ನೂರಕ್ಕೂ ಹೆಚ್ಚು ಪತ್ರ ಬರೆದ ಪರಿವರ್ತಿಕ ಶಿಕ್ಷಕಿ

ಇದು ವಿದ್ಯಾರ್ಥಿಯೊಬ್ಬಳು ಶಿಕ್ಷಕಿಯ ಕಣ್ಣು ತೆರೆಸಿದ ಕಥೆ. ನಿಜಕ್ಕೂ ಕಣ್ಣೀರು ತರಿಸುವಂಥದ್ದು. ಕೊಲೆರಡೊ ಸ್ಪ್ರಿಂಗ್ಸ್ ಎಂಬ ಶಾಲೆಯ ಶಿಕ್ಷಕಿ ಬ್ರಿಟ್ಟಿನಿ ಡರ್ರಾಸ್ ಆಯೋಜಿಸಿದ್ದ ಶಿಕ್ಷಕ- ಪೋಷಕ ಸಭೆಯಲ್ಲಿ ಗಮನಕ್ಕೆ ಬಂದ ಅಂಶ ತನ್ನ ಮನ ಪರಿವರ್ತನೆಗೆ ನಾಂದಿಯಾಯಿತು ಎಂದು ಶಿಕ್ಷಕಿ ತಮ್ಮ ಫೇಸ್ಬುಕ್ ಪೋಸ್ಟಿಂಗ್ ನಲ್ಲಿ ಹೇಳಿಕೊಂಡಿದ್ದಾರೆ.
"ಎರಡು ತಿಂಗಳ ಹಿಂದೆ ಶಿಕ್ಷಕ- ಪೋಷಕ ಸಭೆಯಲ್ಲಿ ನಾನು ಮೊಟ್ಟಮೊದಲ ಬಾರಿಗೆ ಅತ್ತಿದ್ದೆ. ನಾನು ಎರಡು ವರ್ಷದಿಂದ ಬೋಧಿಸುತ್ತಿದ್ದ ವಿದ್ಯಾರ್ಥಿನಿಯ ತಾಯಿ, ನಮ್ಮ ಮಗಳಿಗೆ ಬೋಧಿಸುತ್ತಿದ್ದ ಶಿಕ್ಷಕರ ಪಟ್ಟಿಯನ್ನು ಮೇಜಿನ ಮೇಲೆ ಹರಡಿದರು. ಪ್ರತಿ ಹೆಸರಿನ ಎದುರು ಹೌದು ಅಥವಾ ಇಲ್ಲ ಎಂದು ಬರೆದಿತ್ತು. ನನ್ನ ಹೆಸರಿನ ಮುಂದೆ ಹೌದು ಎಂದು ಬರೆದಿತ್ತು. ತಮ್ಮ ಮಗಳು ತರಗತಿಗೆ ಗೈರುಹಾಜರಾಗುತ್ತಿದ್ದುದಕ್ಕೆ ಕಾರಣಗಳನ್ನು ಆಕೆ ವಿವರಿಸತೊಡಗಿದರು. ಸ್ನೇಹಮಯಿ, ಬುದ್ಧಿವಂತೆ, ಸುಂದರ ವಿದ್ಯಾಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದು ಮಾತ್ರವಲ್ಲದೇ, ಆ ಕೃತ್ಯಕ್ಕೂ ಮುಂದಾಗಿದ್ದಳು. ಸೇಫ್ ಟೂ ಟೆಲ್ ವರದಿಯ ಆಧಾರದಲ್ಲಿ ಪೊಲೀಸರು ಸಕಾಲಕ್ಕೆ ಮಧ್ಯಪ್ರವೇಶಿಸಿ ಆಕೆಯ ಜೀವ ಉಳಿಸಿದರು. ಆಕೆ ತನ್ನ ಸಾಮಾಜಿಕ ಜಾಲತಾಣದ ಖಾತೆ ರದ್ದು ಮಾಡಿದ್ದಳು. ಗುಡ್ಬೈ ಲೆಟರ್ ಬಿಟ್ಟುಹೋಗಿದ್ದಳು. ಆಕೆ ಜಗತ್ತಿಗೇ ಗುಡ್ಬೈ ಹೇಳಲು ಮುಂದಾಗಿದ್ದಳು. ನಾನು ಹಾಗೂ ಪಕ್ಕದಲ್ಲಿ ಕೂತಿದ್ದ ಆಕೆಯ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆವು. ಅಸಹಾಯಕಳಾದ ನಾನು ನನ್ನ ವಿದ್ಯಾರ್ಥಿನಿಗೆ ಬರೆದ ಪತ್ರವನ್ನು ಆಕೆಯ ಆಸ್ಪತ್ರೆಗೆ ತಲುಪಿಸಬಹುದೇ ಎಂದು ಕೇಳಿದೆ. ಅದನ್ನು ತನ್ನ ಮಗಳು ಖಂಡಿತವಾಗಿಯೂ ಇಷ್ಟಪಡುತ್ತಾಳೆ ಎಂದು ಆ ತಾಯಿ ಹೇಳಿದರು. ನನ್ನ ವಿದ್ಯಾರ್ಥಿನಿಗೆ ಪತ್ರ ಸಿಕ್ಕಿತು. ಆಕೆ ಕೂಡಾ ಪತ್ರ ನೋಡಿ ಅತ್ತುಬಿಟ್ಟಳು ಎಂದು ಆಕೆಯ ತಾಯಿ ವಿವರಿಸಿದರು. "ನನ್ನ ಬಗ್ಗೆ ಅಷ್ಟೊಂದು ಒಳ್ಳೆಯ ಮಾತು ಯಾರು ತಾನೆ ಹೇಳಲು ಸಾಧ್ಯ? ನಾನು ಸತ್ತರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದುಕೊಂಡಿದ್ದೆ" ಎಂದು ಆಕೆ ಕೇಳಿದ್ದಾಗಿ ತಾಯಿ ವಿವರಿಸಿದರು. ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಸನಿಹವಾದ್ದಳು ಎಂದು ನನಗೆ ಮನವರಿಕೆಯಾಯಿತು. ಮುಂದಿನ ಎರಡು ತಿಂಗಳ ಕಾಲ ನಾನು ನನ್ನ ಪ್ರತಿ ವಿದ್ಯಾರ್ಥಿಗಳಿಗೆ ಪತ್ರ ಬರೆಯಲು ಮುಂದಾದೆ. ಅವರ ವಿಶೇಷತೆಗಳನ್ನು ವಿವರಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪತ್ರ ಬರೆದೆ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ನಾವು ಅವರ ಮೇಲೆ ಒತ್ತಡ ಹೇರುವುದೇ ಕಾರಣ. ತರಗತಿ ಅಥವಾ ಕ್ರೀಡೆ ಯಾವುದರಲ್ಲಾದರೂ ಮೊದಲಿಗರಾಗಬೇಕು ಎನ್ನುವ ಒತ್ತಡ. ಪ್ರತಿಯೊಬ್ಬರೂ ವಿಶಿಷ್ಟ. ಅದನ್ನು ಬದಲಿಸಲು ಪ್ರಯತ್ನಿಸದೇ, ಅದನ್ನು ಒಪ್ಪಿಕೊಳ್ಳಬೇಕು. ಒಗಟ್ಟು ಬದಲಾವಣೆ ತರಬಲ್ಲದು. ಜೀವಗಳನ್ನೂ ರಕ್ಷಿಸಬಲ್ಲದು"