ಸೇನಾ ಸಿಬ್ಬಂದಿಯಷ್ಟೇ ವೇತನಕ್ಕೆ ನಿವೃತ್ತ ಅರೆಸೇನಾ ಯೋಧರ ಆಗ್ರಹ
ಹೊಸದಿಲ್ಲಿ, ಜು.31: ಭೂಸೇನಾ ಸಿಬ್ಬಂದಿಗೆ ಸರಿಸಮವಾಗಿ ಅರೆಸೇನಾಪಡೆಯ ಸೇವೆಯಲ್ಲಿರುವ ಯೋಧರಿಗೂ ವೇತನ ನೀಡುವಂತೆ ಆಗ್ರಹಿಸುವುದಕ್ಕಾಗಿ ಅರೆಸೇನಾಪಡೆಯ ನೂರಾರು ನಿವೃತ್ತ ಯೋಧರು ಇಂದು ಹೊಸದಿಲ್ಲಿಯ ಜಂತರ್-ಮಂತರ್ನಲ್ಲಿ ಪ್ರದರ್ಶನವೊಂದನ್ನು ನಡೆಸಲಿದ್ದಾರೆ.
ಸುಮಾರು 8 ಲಕ್ಷದಷ್ಟು ನಿವೃತ್ತ ಅರೆಸೇನಾಪಡೆಯ ಸಿಬ್ಬಂದಿಯಿದ್ದು, ಸಿಆರ್ಪಿಎಫ್, ಎಸ್ಎಸ್ಬಿ ಹಾಗೂ ಬಿಎಸ್ಸೆಫ್ಗಳಂತಹ ಘಟಕಗಳಲ್ಲಿ 12 ಲಕ್ಷ ಯೋಧರು ಪ್ರಕೃತ ಸೇವೆಯಲ್ಲಿದ್ದಾರೆ. ತಮ್ಮ ಯೋಧರು ಇಂಡೋ-ನೇಪಾಳ ಹಿಮಾಲಯದ ಗಡಿ ಹಾಗೂ ಭಾರೀ ಎತ್ತರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಸೇನಾ ಸಿಬ್ಬಂದಿಗೆ ಹೋಲಿಸಿದರೆ ಅರೆಸೇನಾ ಯೋಧರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಆ ಕುರಿತು ತಮ್ಮ ಪ್ರತಿಭಟನೆ ದಾಖಲಿಸಿ, ಸೇನಾ ಯೋಧರಿಗೆ ಸಮಾನವಾಗಿ ಅರೆಸೇನಾ ಯೋಧರಿಗೂ ವೇತನ ನೀಡಬೇಕೆಂದು ಆಗ್ರಹಿಸಿ ಸರಕಾರಕ್ಕೆ ಸಂದೇಶವೊಂದನ್ನು ಕಳುಹಿಸಲಿದ್ದೇವೆಂದು ನಿವೃತ್ತ ಅರೆಸೇನಾ ಯೋಧರ ಕಲ್ಯಾಣ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಸಂಚಾಲಕ ರಣಬೀರ್ ಸಿಂಗ್ ತಿಳಿಸಿದ್ದಾರೆ.
ಎಲ್ಲ ರಾಜ್ಯಗಳಲ್ಲಿ ಅರೆಸೇನಾ ಶಾಲೆಗಳನ್ನು ತೆರೆಯಬೇಕೆಂಬ ಬೇಡಿಕೆಯನ್ನೂ ಪ್ರದರ್ಶನವು ಮುಂದಿಡಲಿದೆಯೆಂದು ಅವರು ಹೇಳಿದ್ದಾರೆ.