16 ವರ್ಷ ಕಳೆದರೂ ಬಯಲಾಗದ ಕೊಲೆ ರಹಸ್ಯ

ಕಾಸರಗೋಡು, ಜು.31: ಬೇಕಲ ಪನಯಾಲ್ ಸೇವಾ ಸಹಕಾರಿ ಬ್ಯಾಂಕ್ ಕಾವಲುಗಾರರಾಗಿದ್ದ ಅರವತ್‌ನ ವಿನೋದ್ ಕುಮಾರ್ ಕೊಲೆ ನಡೆದು 16 ವರ್ಷ ಕಳೆದರೂ ಸ್ಥಳೀಯ ಪೊಲೀಸ ರಿಂದ ಹಿಡಿದು ಸಿಬಿಐ ತನಕ ತನಿಖೆ ನಡೆದರೂ ಕೊಲೆಯ ಹಿಂದಿನ ರಹಸ್ಯ, ಇಂದಿಗೂ ಹೊರಬರದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.
2000ರ ಜುಲೈ 30 ರಂದು ರಾತ್ರಿ ಪನೆಯಾಲ್ ಬ್ಯಾಂಕ್‌ನ ಪ್ರಧಾನ ಕಚೇರಿ ಕಾವಲುಗಾರ ವಿನೋದ್ ಕುಮಾರ್‌ರನ್ನು ಕಡಿದು ಕೊಲೆ ಮಾಡಲಾಗಿತ್ತು. ಬ್ಯಾಂಕ್ ಕಟ್ಟಡದ ಹಿಂಬದಿಯ ಕಿಟಿಕಿ ಸರಳನ್ನು ಗ್ಯಾಸ್ ಕಟ್ಟರ್ ಬಳಸಿ ತುಂಡರಿಸಲಾಗಿತ್ತು. ಸ್ಟ್ರಾಂಗ್ ರೂಂನ ಬಾಗಿಲು ಒಡೆದ ಸ್ಥಿತಿಯಲ್ಲಿತ್ತು. ಅವರು ಮಲಗುತ್ತಿದ್ದ ಹಾಸಿಗೆ ಮಡಚಿದ ಸ್ಥಿತಿಯಲ್ಲಿತ್ತು. ಸಮೀಪ ಸಿರಿಂಜ್, ಟಾರ್ಚ್ ಪತ್ತೆಯಾಗಿತ್ತು. ಬೆಳಗ್ಗೆ ಬ್ಯಾಂಕ್‌ನ ಸ್ವಚ್ಛತಾ ಕೆಲಸದ ಮಹಿಳೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿತ್ತು.
ಪೊಲೀಸರು ಹಗಲಿಡೀ ಶೋಧ ನಡೆಸಿದರೂ ವಿನೋದ್ ಕುಮಾರ್ ಪತ್ತೆಯಾಗಿರಲಿಲ್ಲ. ಅಂದು ಸಂಜೆ ಪೆರಿಯಾಟಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಸಮೀಪ ಅವರ ಮೃತದೇಹ ಪತ್ತೆಯಾಗಿತ್ತು. ಕತ್ತು ಹಿಸುಕಿದ ಸ್ಥಿತಿಯಲ್ಲಿತ್ತು. ದೇಹದ ಮೇಲೆ ಗಾಯಗಳಿದ್ದವು. ಎಳೆದೊಯ್ದು ಎಸೆದಿರುವ ರೀತಿ ಮೃತದೇಹ ಕಂಡುಬಂದಿತ್ತು. ಕೃತ್ಯದ ಹಿಂದೆ ದರೋಡೆ ಕೋರರ ಕೈವಾಡ ಇರಬಹುದು ಎಂಬ ಸಂಶಯದಿಂದ ಸ್ಥಳೀಯ ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದರು.ವೃತ್ತಿಪರ ದರೋಡೆಕೋರರನ್ನು ಕೇಂದ್ರೀಕರಿಸಿ ತನಿಖೆ ನಡೆಸಿದರೂ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಕೃತ್ಯ ನಡೆಸಿದವರನ್ನು ಪತ್ತೆಹಚ್ಚುವಂತೆ ಕ್ರಿಯಾ ಸಮಿತಿ ರಚಿಸಿ ಹೋರಾಟ ನಡೆಸಿದರೂ ಬಳಿಕ ಅದು ನಿಷ್ಕ್ರಿಯಗೊಂಡಿತು. ನಂತರ ಸಂಘಟನೆಯೊಂದು ಹೈಕೋರ್ಟ್ ಮೊರೆ ಹೋಗಿ ಸಿಬಿಐಯಿಂದ ಮರು ತನಿಖೆಗೆ ಒತ್ತಾಯಿಸಿತ್ತು. ಇದರಂತೆ ಎರಡು ತಂಡಗಳು ತನಿಖೆ ನಡೆಸಿದರೂ ಹಂತಕರನ್ನು ಪತ್ತೆ ಹಚ್ಚಲು ಸಾಧ್ಯ ವಾಗಲಿಲ್ಲ. ಇದೀಗ ಕೃತ್ಯ ನಡೆದು 16 ವರ್ಷ ಕಳೆ ದರೂ ಕೃತ್ಯದ ಹಿಂದಿನ ಕೈವಾಡದ ಬಗ್ಗೆ ಸುಳಿವು ಕೂಡಾ ಪತ್ತೆಹಚ್ಚಲು ತನಿಖಾ ತಂಡಕ್ಕೆ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ವಿನೋದ್ ಕುಮಾರ್ ಕೊಲೆ ಪ್ರಕರಣ ಇಂದಿಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.





