2 ವಾರದೊಳಗೆ ಮರಳುಗಾರಿಕೆ ಬಗ್ಗೆ ಅಧ್ಯಯನ: ಜಿಲ್ಲಾಧಿಕಾರಿ ಡಾ. ಜಗದೀಶ್

ಮಂಗಳೂರು,ಆ.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಯಾಂತ್ರೀಕೃತ ಮರಳುಗಾರಿಕೆ, ಅಕ್ರಮ ಮರಳುಗಾರಿಕೆ ಕುರಿತಂತೆ ದೂರುಗಳ ಕುರಿತಂತೆ ಎರಡು ವಾರದೊಳಗೆ ಸಮಗ್ರ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಡಾ. ಕೆ.ಜಿ. ಜಗದೀಶ್ ಹೇಳಿದ್ದಾರೆ.
ಇಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾರವರಿಂದ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಹಾಗೂ ಜಿಲ್ಲೆಯಲ್ಲಿ ಸ್ಪಷ್ಟ ಮರಳು ನೀತಿಯೊಂದನ್ನು ರೂಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವ ಬಗ್ಗೆ ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಬೀಳ್ಕೊಡುಗೆ ಸಮಾರಂಭದಲ್ಲಿ ಹೇಳಿಕೊಂಡಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಆಡಳಿತಾತ್ಮಕವಾಗಿ ನಾನು ಇನ್ನಷ್ಟೆ ಅಧ್ಯಯನ ಮಾಡಬೇಕಿದೆ. ಈಗಾಗಲೇ ರಾಮನಗರ, ಯಾದಗಿರಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಆಡಳಿತ ನಿರ್ವಹಿಸಿದ ಅನುಭವ ಇದೆ. ಆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡ ಸಾಕಷ್ಟು ಮುಂದುವರಿದ ಜಿಲ್ಲೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಮಂಗಳೂರಿಗೆ ಪ್ರವಾಸದ ವೇಳೆ ಭೇಟಿ ನೀಡಿದ್ದನ್ನು ಬಿಟ್ಟರೆ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಲಿಮಿಟೆಡ್ (ಆರ್‌ಜಿಆರ್‌ಎಚ್‌ಸಿಎಲ್)ನ ಆಡಳಿತ ನಿರ್ದೇಶಕನಾಗಿದ್ದ ವೇಳೆ ಪರಿಶೀಲನಾ ಸಭೆಗಾಗಿ ಮಂಗಳೂರಿಗೆ ಭೇಟಿ ನೀಡಿದ್ದೆ ಎಂದವರು ಹೇಳಿದರು.
ಎಂಆರ್‌ಪಿಎಲ್‌ನ ತೃತೀಯ ಹಂತದ ವಿಸ್ತರಣೆಗಾಗಿ ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಭೂಮಿ ನೀಡಲು ವಿರೋಧಿಸಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿ ಮತ್ತು ಸಾಮಾಜಿಕ ಸಮಾನತೆ ಜತೆ ಜತೆಯಾಗಿ ಸಾಗಬೇಕು. ಆದರೆ ಅಭಿವೃದ್ದಿಯು ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗುವಂತಿರಬಾರದು. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರದಲ್ಲಿನ ಫುಟ್‌ಪಾತ್‌ಗಳ ಸಮಸ್ಯೆ, ಪಾರ್ಕಿಂಗ್ ಅವ್ಯವಸ್ಥೆ ಕುರಿತಂತೆ ಸುದ್ದಿಗಾರರು ಗಮನ ಸೆಳೆದಾಗ, ಇಂತಹ ಸಮಸ್ಯೆಗಳಿಗೆ ತಕ್ಷಣಕ್ಕೆ ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳುವುದು ಅಸಾಧ್ಯ. ದೀರ್ಘಕಾಲೀನ ಯೋಜನೆಯ ಮೂಲಕ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ. ಮಾತ್ರವಲ್ಲದೆ, ಈ ಬಗ್ಗೆ ಸಂಬಂಧಪಟ್ಟವರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಆಗಲೂ ಅವರು ಎಚ್ಚೆತ್ತುಕೊಳ್ಳದಿದ್ದಾಗ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ನಗರದಲ್ಲಿನ ಸಮಸ್ಯೆಗಳ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯಾಡಳಿತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಮಾತುಕತೆ ನಡೆಸಿ ಪರಿಶೀಲನೆ ನಡೆಸಿ ನಗರದಲ್ಲಿ ಸುಸ್ಧಿರ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದರು.
►ಮುಕ್ತ ಮನಸ್ಸಿನಿಂದ ಬಂದಿರುವೆ!
ಉತ್ತಮ ಕೆಲಸ ಆಗಬೇಕಾದರೆ ಜನಪ್ರತಿನಿಧಿಗಳು, ಮಾಧ್ಯಮಗಳ ಜತೆ ಜನರ ಸಹಕಾರವೂ ಅಗತ್ಯ ಎಂದು ಹೇಳಿದ ನೂತನ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ಮಂಗಳೂರು ಶಿಕ್ಷಣ, ಆರೋಗ್ಯ ಮಾತ್ರವಲ್ಲದೆ ಅಭಿವೃದ್ದಿಯಲ್ಲೂ ಮುಂದುವರಿದ ಜಿಲ್ಲೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಜಿಲ್ಲೆ ಅದೆಷ್ಟೇ ಮುಂದುವರಿದಿದ್ದರೂ ಮುಂಬರುವ ಸವಾಲುಗಳನ್ನು ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿಯೂ ಸನ್ನದ್ಧವಾಗಿರಬೇಕು. ಜಿಲ್ಲೆಯ ಬಗ್ಗೆ ಯಾವುದೇ ಪೂರ್ವ ಪರಿಕಲ್ಪನೆ ಇಲ್ಲದೆ, ಮುಕ್ತ ಮನಸ್ಸಿನಿಂದ ಇಲ್ಲಿ ನನ್ನ ಕರ್ತವ್ಯ ನಿರ್ವಹಿಸಲು ಬಂದಿರುವುದರಿಂದ ಜನಪ್ರತಿನಿಧಿಗಳು, ಸ್ಥಳೀಯಾಡಳಿತ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ತಾನು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸಲು ಬದ್ಧ ಎಂದು ಹೇಳಿದರು.►127 ನೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ
ದಕ್ಷಿಣ ಕನ್ನಡ ಜಿಲ್ಲೆಯ 127ನೆ ಜಿಲ್ಲಾಧಿಕಾರಿಯಾಗಿ, ಐಎಎಸ್ ದರ್ಜೆಯ, 38ರ ಹರೆಯದ ಡಾ. ಕೆ.ಜಿ. ಜಗದೀಶ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಮೂಲತ: ತುಮಕೂರಿನ ಕೊರಟಗೆರೆಯವರಾಗಿರುವ ಡಾ. ಜಗದೀಶ್ 2005ನೆ ಐಎಎಸ್ ತಂಡದವರು. ಗುಲ್ಬರ್ಗಾದಲ್ಲಿ ಸಹಾಯಕ ಆಯುಕ್ತರಾಗಿ ಸರಕಾರಿ ಸೇವೆಯನ್ನು ಆರಂಭಿಸಿದ ಇವರು, ರಾಮನಗರ, ಯಾದಗಿರಿ ಹಾಗೂ ಹಾಸನಗಳಲ್ಲಿ ಜಿಲ್ಲಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2013ರ ಜೂನ್ 14ರಿಂದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಲಿಮಿಟೆಡ್‌ನ ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.







