ಕೋಟೆಕಾರ್: ಹೆದ್ದಾರಿಯ ವಾಣಿಜ್ಯ ತೆರಿಗೆ ಕೇಂದ್ರ ತೆರವಿಗೆ ನಾಗರಿಕರ ಆಗ್ರಹ
ಉಳ್ಳಾಲ,ಆ.1: ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರದೆದುರು ಹೆದ್ದಾರಿಯಲ್ಲೇ ದಿನವಿಡೀ ನಿಲ್ಲುತ್ತಿರುವ ಸರಕು ಘನ ವಾಹನಗಳಿಂದ ದಿನನಿತ್ಯವೂ ಅಪಘಾತಗಳು ಸಂಭವಿಸುತ್ತಿದ್ದು, ಭಾನುವಾರ ಸಂಜೆಯೂ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ ನಿಂತಿದ್ದ ಲಾರಿಯೊಂದು ಧಿಡೀರಣೆ ಸೂಚನೆ ನೀಡದ ಹೊರಟ ಕಾರಣ ಅಪಘಾತಕ್ಕೀಡಾಗಿ ಆಕೆ ಮತ್ತು ಜತೆಯಲ್ಲಿದ್ದ ಮಗು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಉದ್ರಿಕ್ತ ಗ್ರಾಮಸ್ಥರು ಇಂತಹ ಅನಧಿಕೃತವಾಗಿ ಹೆದ್ದಾರಿಗಳಲ್ಲಿ ಕಾರ್ಯಾಚರಿಸುತ್ತಿರುವ ಕೇಂದ್ರಗಳನ್ನು ಕೂಡಲೇ ತೆರವು ಗೊಳಿಸಬೇಕೆಂದು ಪ್ರತಿಭಟಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ತೊಕ್ಕೊಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದ ವಾಣಿಜ್ಯ ತೆರಿಗೆ ತಪಾಸಣಾ ಕೇಂದ್ರವು ಹೆದ್ದಾರಿ ಅಗಲೀಕರಣ ಸಂಧರ್ಭದಲ್ಲಿ ಕೋಟೆಕಾರಿಗೆ ಸ್ಥಳಾಂತರಗೊಂಡಿತ್ತು. ತಪಾಸಣೆಗೆಂದು ಬರುವ ಘನ ಸರಕು ವಾಹನಗಳು ರಸ್ತೆಯಲ್ಲೇ ಠಿಕಾಣಿ ಹೂಡುತ್ತಿದ್ದು ಇದರಿಂದಾಗಿ ಬಹಳಷ್ಟು ಅಫಘಾತ ಪ್ರಕರಣಗಳು ನಡೆಯುತ್ತಿವೆ ಎಂಬುದು ನಾಗರಿಕರ ಆರೋಪ. ಭಾನುವಾರ ಸಂಜೆಯೂ ಮಹಿಳೆಯೊಬ್ಬರು ತನ್ನ ಪುಟ್ಟ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ಉಚ್ಚಿಲದ ಕಡೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ತಪಾಸಣೆಗೆಂದು ನಿಂತಿದ್ದ ಲಾರಿ ಧಿಡೀರಣೆ ಬಲಬದಿಗೆ ಚಲಿಸಿದಾಗ ವಿಚಲಿತರಾಗಿ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ತಾಯಿ,ಮಗು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.ಸ್ಥಳದಲ್ಲಿದ್ದ ನೂರಾರು ನಾಗರಿಕರು ಉದ್ರಿಕ್ತಗೊಂಡು ತಕ್ಷಣ ತಪಾಸಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದು ಅವೈಜ್ಞಾನಿಕ ಕೇಂದ್ರದ ತೆರವಿಗೆ ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಇನ್ಸ್‌ಪೆಕ್ಟರ್ ಪ್ರತಿಭಟನಾಕಾರರನ್ನು ಸೌಜನ್ಯದಿಂದಲೇ ಮನವೊಲಿಸಿ ಸೋಮವಾರದಂದು ಸಭೆ ನಡೆಸಿ ಸಮಸ್ಯೆಯ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು.
ಘಟನೆ ಬಗ್ಗೆ ಸೋಮವಾರ ಬೆಳಿಗ್ಗೆ ತಪಾಸಣಾ ಕೇಂದ್ರದಲ್ಲಿ ಎಸಿಪಿ ಶೃತಿ ಎನ್ ಎಸ್,ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್ ಶಿವಪ್ರಕಾಶ್,ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯ ಮುಖ್ಯಸ್ಥರು,ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಕೃಷ್ಣಕುಮಾರ್ ಮತ್ತು ಸ್ಥಳೀಯ ನಾಗರಿಕ ಸಮಿತಿ ಯುವವೇದಿಕೆಯ ಸದಸ್ಯರ ಸಮಕ್ಷಮದಲ್ಲಿ ಸಭೆಯೊಂದು ನಡೆದಿದ್ದು ಅಪಘಾತಗಳನ್ನು ತಡೆಯುವುದರ ಬಗ್ಗೆ ಚರ್ಚಿಸಲಾಗಿದೆ.ಸಭೆಯಲ್ಲಿ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಅವರು ವಾಣಿಜ್ಯ ಇಲಾಖಾ ಉಪ ಆಯುಕ್ತರಿಗೆ ರಸ್ತೆ ಅಪಘಾತ ಸುರಕ್ಷತೆಯ ಬಗೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.





.jpg.jpg)

