ಹಾಸನ: ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಕರವೇಯಿಂದ ಮೌನ ಪ್ರತಿಭಟನೆ

ಹಾಸನ,ಆ.1: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆಯ ಮುಂದೆ ಮೌನ ಪ್ರತಿಭಟನೆ ನಡೆಸಲಾಯಿತು.
ಬಡಬಗ್ಗರಿಗೆ, ದೀನದಲಿತರಿಗೆ ವರದಾಯಕವಾಗಬೇಕಾಗಿದ್ದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಶಾಪವಾಗಿ ಪರಿಣಮಿಸಿದೆ. ಇಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಯಿಂದ ಹಿಡಿದು ಕಟ್ಟ ಕಡೆಯ ನೌಕರರವರೆಗೂ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ನಡೆಯುತ್ತಲೆ ಇದೆ ಎಂದು ದೂರಿದರು. ರೋಗಿಗಳನ್ನು ಕರೆತರುವ ವಾಹನಗಳನ್ನು ನಿಲ್ಲಿಸಲು ಬಿಡದ ನಿರ್ದೇಶಕರು ಬಡರೋಗಿಗಳ ವಿರುದ್ಧ ತಮ್ಮ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಪಾಯ ಸ್ಥಿತಿಯಲ್ಲಿರುವ ರೋಗಿಗಳನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ಯಲು ಸಿಬ್ಬಂದಿಯಿಲ್ಲ. ಪ್ರತಿನಿತ್ಯ ಕರ್ತವ್ಯದಲ್ಲಿರಬೇಕಾದ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ತರಬೇತಿಯಲ್ಲಿರುವ ವೈದ್ಯರು ತಮಗಿಷ್ಟ ಬಂದಂತೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಅನೇಕ ಶುಶ್ರೂಕಿಯರು ರೋಗಿಗಳ ಜೊತೆ ಉಡಾಫೆ ಹಾಗೂ ಧರ್ಪದಿಂದ ವರ್ತಿಸುತ್ತಿದ್ದಾರೆ. ಹೆರಿಗೆ ವಾರ್ಡ್ ಸೇರಿದಂತೆ ಹಲವೆಡೆ ಲಂಚ ನೀಡದಿದ್ದರೇ ಸರಿಯಾಗಿ ಸೇವೆ ಸಿಗುವುದೆ ಇಲ್ಲ. ಹೊರರೋಗಿ ಚೀಟಿ ನೀಡುವ ಕೊಠಡಿಯಲ್ಲಿ ಮೊದಲ ಮಹಡಿಯಿಂದ ಶೌಚಾಲಯದ ನೀರು ಸೋರುತ್ತಿದೆ. ಇನ್ನು ಹಲವಾರು ಸಮಸ್ಯೆಗಳನ್ನು ಹೊಂದಿರುವ ನೂತನ ಆಸ್ಪತ್ರೆಯನ್ನು ಕೂಡಲೆ ಸರಿಪಡಿಸುವಂತೆ ಇಂದು ಸಾಂಕೇತಿಕವಾಗಿ ಮೌನ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾವನ್ನು ಸರಿಪಡಿಸಿ ಬಡಬಗ್ಗರಿಗೆ, ದೀನದಲಿತರಿಗೆ ಉತ್ತಮ ಸೇವೆ ನೀಡದಿದ್ದರೇ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮೊದಲು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮುಖ್ಯ ಧ್ವಾರದಲ್ಲಿ ಕೆಲ ಸಮಯ ಮೌನ ಪ್ರತಿಭಟನಾ ಧರಣೀ ನಡೆಸಿ, ನಂತರ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ತೆರಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಡಿ.ಬಿ.ಎಚ್. ದೇವು, ನಗರ ಅಧ್ಯಕ್ಷ ನಯಾಜ್ ಪಾಷ, ಅಭಿಷೇಕ್, ಜುಬೇರಾ, ಸುನೀಲ್, ಗುರು ಇತರರು ಪಾಲ್ಗೊಂಡಿದ್ದರು.





