ಹೃದಯದಲ್ಲಿ ಹೆಚ್ಚುವರಿ ಕೋಣೆ: ಎ.ಜೆ.ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ಮಂಗಳೂರು,ಜು.31:ಹೃದಯದಲ್ಲಿ ಹೆಚ್ಚುವರಿ ಕೋಣೆ ಮತ್ತು ಎರಡು ರಂಧ್ರಗಳ ನ್ಯೂನತೆಯನ್ನೊಳಗೊಂಡಿದ್ದ ಎರಡು ವರ್ಷದ ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆಯು ನಗರದ ಎ.ಜೆ.ಆಸ್ಪತ್ರೆಯಲ್ಲಿ ನಡೆದಿದೆ.
ಅಂಕೋಲದ 2 ವರ್ಷದ ಮಗುವು ಆಟವಾಡುವಾಗ ಉಸಿರಾಟದ ತೊಂದರೆಯನ್ನು ಅನುಭಸುತಿತ್ತು. ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಗುವನ್ನು ಪರೀಕ್ಷಿಸಿದ ಮಕ್ಕಳ ಹೃದ್ರೋಗ ತಜ್ಞರಾದ ಡಾ. ಪ್ರೇಮ್ ಆಳ್ವರವರು ಹೃದಯದ ಸ್ಕ್ಯಾನ್ (ಎಕೋ)ನ ಮೂಲಕ ಈ ಮಗುವಿಗೆ ತೀರಾ ಅಪರೂಪದ ತೊಂದರೆಯಾಗಿರುವ ಕೊರ್ಟ್ರಿಯೇಟ್ರಿಟಮ್‌ನ್ನು ಪತ್ತೆಹಚ್ಚಿದ್ದರು.
ಇದೊಂದು ಹೃದಯದಲ್ಲಿ ಹೆಚ್ಚುವರಿ ಕೋಣೆ ಮತ್ತು ಎರಡು ರಂದ್ರಗಳನ್ನೊಳಗೊಂಡ ನ್ಯೂನತೆಯಾಗಿದೆ. ಹೃದಯದಲ್ಲಿ ನಾಲ್ಕು ಕೋಣೆಗಳಿದ್ದು 2 ಮೇಲ್ಕೋಣೆ ಮತ್ತು 2 ಕೆಳಕೋಣೆಗಳೆಂದು ಗುರುತಿಸಲಾಗುತ್ತದೆ. ಆದರೆ ಈ ಮಗುವಿಗೆ ಹೃದಯದಲ್ಲಿ 3 ಮೇಲ್ಕೋಣೆಗಳಿದ್ದು ಎರಡು ರಂದ್ರಗಳಿದ್ದವು. ಈ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದ್ದು ಶಸ್ತ್ರಚಿಕಿತ್ಸೆಗಾಗಿ ಮಕ್ಕಳ ಹ್ರದ್ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಗೌರವ್ ಶೆಟ್ಟಿಯವರು ಶಸ್ತ್ರಚಿಕಿತ್ಸೆಯನ್ನು ಕೈಗೆತ್ತಿಕೊಂಡರು. ಮಗುಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಮುಖ್ಯ ಅರಿವಳಿಕೆ ತಜ್ಞರಾದ ಡಾ. ಗುರುರಾಜ್ ತಂತ್ರಿಯವರು ಅರಿವಳಿಕೆ ಮತ್ತು ತೀವ್ರ ನಿಗಾ ಘಟಕದ ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಮಗುವು ಈಗ ಸಂಪೂರ್ಣ ಆರೋಗ್ಯದಿಂದಿದ್ದು ತನ್ನ ಮಿತ್ರರೊಂದಿಗೆ ಮನೆಯಲ್ಲಿ ಆರಾಮವಾಗಿ ಆಟವಾಡುತ್ತಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಸರಕಾರಿ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಮಾಡಲಾಯಿತು.
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದ್ರೋಗ ವಿಭಾಗವು ನವಜಾತ ಶಿಶುಗಳು, ಶಿಶುಗಳು ಮತ್ತು ಮಕ್ಕಳ ಅನೇಕ ಜನ್ಮತಃ ಹೃದ್ರೋಗ ದೋಷಗಳಿಗೆ ಸರಳ ಮತ್ತು ಸಂಕೀರ್ಣ ರೀತಿಯ ಚಿಕಿತ್ಸೆಯನ್ನು ನೀಡಲು ವಿಶ್ವದರ್ಜೆಗೆ ಸಮನಾದ ಸೌಲಭ್ಯಗಳನ್ನು ಹೊಂದಿದೆ. ಈ ವಿಭಾಗವು ಮಕ್ಕಳ ಹೃದ್ರೋಗ ಚಿಕಿತ್ಸೆ, ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸೆ, ಮಕ್ಕಳ ಹೃದಯ ಅರಿವಳಿಕೆ, ಮಕ್ಕಳ ಹೃದಯ ತೀವ್ರ ನಿಗಾ ಘಟಕವನ್ನು ಒಳಗೊಂಡಿದ್ದು ವಿಶೇಷ ಪರಿಣತಿ ಹೊಂದಿರುವ ವೈದ್ಯರು, ದಾದಿಯರು, ಉಸಿರಾಟದ ಚಿಕಿತ್ಸಕರನ್ನು ಒಳಗೊಂಡಿದೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







