ಸೈಂಟ್ ಥೋಮಸ್ ಶಾಲೆಗೆ ದಾಳಿ ಪ್ರಕರಣ: 13 ಮಂದಿ ಶ್ರೀರಾಮಸೇನೆ ಕಾರ್ಯಕರ್ತರ ಬಂಧನ

ಮಂಗಳೂರು,ಆ.1: ನಗರದ ಹೊರವಲಯದ ನೀರುಮಾರ್ಗ ಸಮೀಪದ ಬೊಂಡಂತಿಲ ಪಡು ಎಂಬಲ್ಲಿರುವ ಸೈಂಟ್ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಬಿಕ್, ಉರ್ದು ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಆರೋಪಿಸಿ ಶಾಲೆಗೆ ದಾಳಿ ನಡೆಸಿದ 13 ಮಂದಿ ಶ್ರೀರಾಮಸೇನೆ ಕಾರ್ಯಕರ್ತರನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.
ಬೊಂಡಂತಿಲ ನಿವಾಸಿಗಳಾದ ಸುನಿಲ್, ನಿತಿನ್, ರಾಜೇಶ್, ರಾಘವೇಂದ್ರ, ರವಿ, ನಿತಿನ್ ಶೆಟ್ಟಿ, ಕಿಶೋರ್ ಸನಿಲ್, ಚೇತನ್, ರವೀಂದ್ರ, ಮುಖೇಶ್, ಪ್ರಕಾಶ, ಜಯಂತ ಮತ್ತು ಚಂದ್ರಹಾಸ ಎಂಬ 13 ಜನ ಆರೋಪಿಗಳನ್ನು ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು 16 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ರವಿವಾರದಂದು ಬಂಧನಕ್ಕೀಡಾಗಿದ್ದ ಸಂತೋಷ್ , ನಿತಿನ್, ದಿನೇಶ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಅಯುಕ್ತೆ ಶ್ರುತಿ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಗಳಾದ ಸುಧಾಕರ್ ಹಾಗೂ ವೆಂಕಟೇಶ್ ಮತ್ತು ಸಿಬ್ಬಂದಿಯವರು ಆರೋಪಿಗಳ ಬಂಧನದ ಕಾರ್ಯ ನಿರ್ವಹಿಸಿದ್ದಾರೆ.





