ತರಗತಿ ಬಹಿಷ್ಕರಿಸಿದ ಎಲ್ಯಾರ್‌ಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು

ಮಂಗಳೂರು,ಆ.1 :ರಾಜ್ಯ ಸರಕಾರದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಯಾರ್‌ಪದವು ಇಲ್ಲಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಶಾಲೆಯ ಕೊಠಡಿಗೆ ಬೀಗ ಜಡಿದು ಪ್ರತಿಭಟಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ ಅವರು ರಾಜ್ಯ ಸರ್ಕಾರವು ಸರ್ಕಾರಿ ಶಾಲೆಯಿಂದ ಸರ್ಕಾರಕ್ಕೆ ನಷ್ಟವಾಗುತ್ತಿದ್ದು ಶಿಕ್ಷಕರ ವರ್ಗಾವಣೆ ಮಾಡಿದರೆ ನಷ್ಟ ಪ್ರಮಾಣ ಕಡಿಮೆಯಾಗಬಹುದು ಎನ್ನುತ್ತಿದೆ. ಆದರೆ ಶಿಕ್ಷಣ ಕ್ಷೇತ್ರವನ್ನು ಲಾಭ-ನಷ್ಟದ ಆಧಾರದಲ್ಲಿ ಅಳೆಯಬಾರದು .ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುವುದು ಅವರ ಹಕ್ಕಾಗಿದ್ದು ಆ ಬಗ್ಗೆ ಸರ್ಕಾರಕ್ಕೆ ತಿಳುವಳಿಕೆ ಇರಲಿ .ಸರ್ಕಾರ ಪರೋಕ್ಷವಾಗಿ ಶಾಲೆಗಳ ಮುಚ್ಚುವ ಪ್ರಯತ್ನ ನಡೆಸುತ್ತಿದ್ದು ಇದನ್ನು ನಿಲ್ಲಿಸದಿದ್ದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲಾಗುವುದು ಎಂದರು.
ಶಾಲೆಯ ವಿದ್ಯಾರ್ಥಿ ಸಂಘದ ಮುಖಂಡ ಶಂಶಿದಾ ಮಾತನಾಡಿ ನಮ್ಮ ಶಾಲೆಗೆ ದೈಹಿಕ ಶಿಕ್ಷಕರು ಬೇಕೆಂದು ಕೇಳುತ್ತಿರುವಾಗ ಸರ್ಕಾರ ನಮ್ಮ ಶಿಕ್ಷಕಿಯರನ್ನೇ ವರ್ಗಾಯಿಸಲು ಹೊರಟಿರುವುದು ನೋವಾಗುತ್ತಿದೆ. ಎರಡು ತಿಂಗಳ ನಂತರ ಹಿರಿಯ ಶಿಕ್ಷಕಿಯೊಬ್ಬರು ನಿವೃತ್ತಿ ಹೊಂದುತಿತಿದ್ದು ಅವರ ಜಾಗದಲ್ಲಿಯೇ ಮತ್ತೊಬ್ಬರು ವರ್ಗಾವಣೆಯಾದರೆ ನಾವು ಶಾಲೆಯಲ್ಲಿ ಯಾವ ರೀತಿ ಶಿಕ್ಷಣ ಪಡೆಯಲು ಸಾಧ್ಯ ಎಂದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಶ್ಮೀನಾ, ಉಪಾಧ್ಯಕ್ಷ ವಿದ್ಯಾ, ಪೋಷಕರಾದ ಆಶ್ರಫ್, ಲತೀಫಾ, ಕಲೀಂ ಮತ್ತು ಸ್ಥಳೀಯ ಮುಖಂಡರಾದ ಇಬ್ರಾಹಿಂ, ಸಲೀಂ ಉಪಸ್ಥಿತರಿದ್ದರು.







