ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಲೋಕೇಶ್ವರಿ
ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

ಮಡಿಕೇರಿ, ಆ.1: ಸಾಹಿತ್ಯ, ಸಂಸ್ಕೃತಿಯ ಸದಭಿರುಚಿಯನ್ನು ಇಂದಿನ ಸಮಾಜಕ್ಕೆ ಪರಿಚಯಿಸುವುದರೊಂದಿಗೆ, ನಶಿಸುತ್ತಿರುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೂಡಿಗೆ ಸೈನಿಕ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ಭಾರತೀಯ ಕಲೆ ಮತ್ತು ಸಂಸ್ಕೃತಿ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದರು. ಮನುಷ್ಯನಿಗೆ ನೆಮ್ಮದಿ ಹಾಗೂ ಸಮಾಧಾನ ನೀಡುವ ಅಪರೂಪದ ಕಲೆ ಸಂಸ್ಕೃತಿ. ಮಾನವನ ಮಾನಸಿಕ ನೆಮ್ಮದಿಗೆ ಕಲೆ ಪೂರಕವಾಗಿದೆ. ಆದ್ದರಿಂದ ಕಲೆಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು. ಅನೇಕ ಭಾಷೆ, ಉಪ ಭಾಷೆ ಸಂಸ್ಕೃತಿ ಜೊತೆಗೆ ಆಚಾರ ವಿಚಾರ ಹೊಂದಿರುವ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ರಾಮಾಯಣ, ಮಹಾಭಾರತ ಮಹಾನ್ ಗ್ರಂಥಗಳು ಸ್ಫೂರ್ತಿ ಹೆಚ್ಚಿಸಲು ಪೂರಕ ಗ್ರಂಥಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೈನಿಕ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್.ಎಚ್.ಬೆರ್ಸನ್ ಮಾತನಾಡಿ, ಪ್ರತಿಯೊಬ್ಬರೂ ಸಂಸ್ಕೃತಿಯ ಪರಂಪರೆ ಕುರಿತು ಅರಿವು ಬೆಳೆಸಿಕೊಳ್ಳಬೇಕು. ಇದರಿಂದಾಗಿ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಸಾಧ್ಯ ಎಂದರು. ಪ್ರತಿಯೊಬ್ಬ ನಾಗರಿಕರು ರಾಷ್ಟ್ರಾಭಿಮಾನ ಹಾಗೂ ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಜೊತೆಗೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಿ ಸದೃಢ ಸಮಾಜವನ್ನು ನಿರ್ಮಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್.ಕುಳ್ಳಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜನಪದ ಕಲೆ ಬಾಯಿಯಿಂದ ಬಾಯಿಗೆ, ನಾಡಿನಿಂದ ನಾಡಿಗೆ ಹರಿದು ಬಂದು ವಿಶ್ವದಲ್ಲಿಯೇ ಶ್ರೇಷ್ಠ ಕಲೆ ಎನಿಸಿಕೊಂಡಿದೆ. ಯುವಶಕ್ತಿಯು ಯೋಗ, ಧ್ಯಾನ, ಸಂಸ್ಕೃತಿಯ ಕಡೆಗೆ ಗಮನ ನೀಡಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನೇಕ ಯೋಜನೆಗಳನ್ನು ಕೈಗೊಂಡು ಕಲಾವಿದರಿಗೆ ನೆರವು ನೀಡುತ್ತಿದೆ. ಇಲಾಖೆಯ ಮೂಲಕ, ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಮೂಲಕ ಸಂಗೀತ, ಹರಿಕಥೆ ವಾಯಲಿನ್, ಕೊಳಲುವಾದನ, ಜನಪದ ನೃತ್ಯಗಳಂತಹ ಕಲೆಗಳನ್ನು ಸಮಾಜಕ್ಕೆ ಪರಿಚಯಿಸಲು ಇಂತಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಇಲಾಖೆಯ ವಿವಿಧ ಯೋಜನೆಯ ಮಾಹಿತಿ ನೀಡಿದರು.
ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಂಗವಾಗಿ ಸುಗಮ ಸಂಗೀತ, ಹರಿಕಥೆ, ವಾಯಿಲಿನ್ ವಾದನ ಶಾಸ್ತ್ರೀಯ ಸಂಗೀತ, ಕೊಳಲು ವಾದನ, ಸಮೂಹ ನೃತ್ಯ, ಪೌರಾಣಿಕ ನಾಟಕ, ಜನಪದ ಗೀತ, ಜನಪದ ನೃತ್ಯ ಮುಂತಾದ ಕಾರ್ಯಕ್ರಮಗಳು ನೋಡುಗರ ಮನತಣಿಸಿದವು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಕೆ.ಆರ್.ಮಂಜುಳಾ, ತಾಪಂ ಸದಸ್ಯ ಗಣೇಶ್, ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕ ಎನ್.ಕೆ.ಮೋಹನ್ , ಕೆ.ಕೆ.ನಾಗರಾಜ ಶೆಟ್ಟಿ, ಸೈನಿಕ ಶಾಲೆಯ ಉಪ ಪ್ರಾಂಶುಪಾಲೆ ಲೆಫ್ಟಿನೆಂಟ್ ಕರ್ನಲ್ ಮುನಿಷಾವರ್ಮ ಉಪಸ್ಥಿತರಿದ್ದರು.







