ಖಂಡಿಸಿ ಪ್ರತಿಭಟನೆ ರೈತರ ಮೇಲೆ ಹೂಡಿರುವ ಮೊಕದ್ದಮೆಯನ್ನು ವಾಪಸ್ ಪಡೆಯಲು ಆಗ್ರಹ
ಯಮನೂರಿನ ಪೊಲೀಸ್ ದೌರ್ಜನ್ಯ

ಶಿವಮೊಗ್ಗ, ಆ.1: ಮಹಾದಾಯಿ ನದಿ ನೀರಿನ ಹೋರಾಟದಲ್ಲಿ ಭಾಗಿಯಾಗಿದ್ದ ಧಾರವಾಡ ಜಿಲ್ಲೆ ನವಲಗುಂದ ಮತ್ತು ನರಗುಂದ ತಾಲೂಕಿನ ಮಹಿಳೆಯರ, ರೈತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ವಿರೋಧಿಸಿ, ಸೋಮವಾರ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸಂಘಟನೆಯು ನಗರದ ಡಿ.ಸಿ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಅರ್ಪಿಸಿತು. ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದವರ ಮೇಲೆ ಪೊಲೀಸರು ಮನಬಂದಂತೆ ಲಾಠಿ ಪ್ರಹಾರ ನಡೆಸಿ, ದೌರ್ಜನ್ಯ ಎಸಗಿದ್ದಾರೆ. ಪೊಲೀಸರ ಈ ವರ್ತನೆ ಗಮನಿಸಿದರೆ ಬ್ರಿಟಿಷ್ ಸರಕಾರದ ದೌರ್ಜನ್ಯವನ್ನೂ ಮೀರಿಸುವಂತಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ವೇಳೆ ಸರಕಾರಿ ಕಚೇರಿ, ಪೀಠೋಪಕರಣ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿಹಚ್ಚಿದವರು ತಪ್ಪಿಸಿಕೊಂಡಿದ್ದಾರೆ. ಆದರೆ, ನಿರಪರಾಧಿಗಳು ಪೊಲೀಸರಿಗೆ ಸಿಕ್ಕಿಬಿದ್ದು ದೌರ್ಜನ್ಯಕ್ಕೀಡಾಗಿದ್ದಾರೆ. ಇಂತಹ ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದು ಖಂಡನೀಯವಾದುದಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಶಾಂತಿಯುತ ಪ್ರತಿಭಟನೆ ಸಂದರ್ಭದಲ್ಲಿ ನಿರ್ಜೀವ ವಸ್ತುಗಳನ್ನು ಸುಟ್ಟು ಹಾಕಿರುವುದು ಅಪರಾಧವಲ್ಲ. ಆದರೆ ನಿಜವಾದ ತಪ್ಪಿತಸ್ಥರನ್ನು ಹುಡುಕಿ ಬಂಧಿಸುವ ಬದಲು ಕೈಗೆ ಸಿಕ್ಕವರನ್ನು ಬಂಧಿಸಿ, ಹಿಂಸಿಸಲಾಗಿದೆ. ನೀರು ಕೇಳಿದವರ ಮೇಲೆ ಕೊಲೆಯತ್ನದಂತಹ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿರುವುದು ಜನವಿರೋಧಿ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಘಟನೆ ಸಂಬಂಧ ಪೊಲೀಸ್ ತನಿಖೆಗೆ ಆದೇಶಿಸಿರುವ ಸರಕಾರದ ಕ್ರಮ ಸರಿಯಲ್ಲ. ತಕ್ಷಣವೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕ್ರಮಕೈಗೊಳ್ಳಬೇಕು. ಬಂಧಿತರನ್ನು ಬಿಡುಗಡೆ ಮಾಡಬೇಕು. ಅಮಾಯಕ ರೈತರ ಮೇಲೆ ಹೂಡಿರುವ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಜಿಲ್ಲಾಧ್ಯಕ್ಷ ಚಂದ್ರಪ್ಪ, ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.





